ADVERTISEMENT

ಕೊರೊನಾ: ಬೆಂಗಳೂರಿನಲ್ಲಿ ಒಂದೇ ದಿನ 36 ಮಂದಿಗೆ ಸೋಂಕು

ನಗರದಲ್ಲಿ ಸೋಂಕಿತರ ಸಂಖ್ಯೆ 339ಕ್ಕೆ ಏರಿಕೆ * 21ಮಂದಿಗೆ ಸೋಂಕು ತಗುಲಿದ್ದು ಹೇಗೆ ಎಂಬುದೇ ನಿಗೂಢ

​ಪ್ರಜಾವಾಣಿ ವಾರ್ತೆ
Published 30 ಮೇ 2020, 21:23 IST
Last Updated 30 ಮೇ 2020, 21:23 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಬೆಂಗಳೂರು: ನಗರದಲ್ಲಿ ಶನಿವಾರ ಒಂದೇ ದಿನ 36 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 339ಕ್ಕೆ ಏರಿಕೆಯಾಗಿದೆ. ಈವರೆಗೆ ದಿನವೊಂದರಲ್ಲಿ ಇಷ್ಟೊಂದು ಪ್ರಕರಣಗಳು ಯಾವತ್ತೂ ವರದಿಯಾಗಿರಲಿಲ್ಲ.

ನಗರದಲ್ಲಿ ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಕೊರೊನಾ ಸೋಂಕಿತರ ಪ್ರಮಾಣವೂ ಒಂದೇ ಸಮನೆ ಹೆಚ್ಚುತ್ತಿದೆ. ಸೋಂಕಿತರ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡುವುದು ಬಿಬಿಎಂಪಿ ಹಾಗೂ ಆರೋಗ್ಯ ಅಧಿಕಾರಿಗಳಿಗೆ ತಲೆನೋವಾಗಿದೆ.

ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ 21 ಸೋಂಕಿತರಿಗೆ ಹೇಗೆ ಸೋಂಕು ತಗುಲಿದೆ ಎಂಬುದೇ ಪತ್ತೆಯಾಗಿಲ್ಲ. ಇದರಿಂದಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದವರನ್ನೂ ಗುರುತಿಸಿ, ಕ್ವಾರಂಟೈನ್‌ಗೆ ಒಳಪಡಿಸುವುದು ಕಷ್ಟಸಾಧ್ಯವಾಗಿದೆ.

ADVERTISEMENT

ಎಸ್.ಕೆ.ಗಾರ್ಡನ್ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ 38 ವರ್ಷದ ಮಹಿಳೆಯ (ರೋಗಿ 2180) ಸಂಪರ್ಕದಿಂದ 14 ಮಂದಿಗೆ ಸೋಂಕು ತಗುಲಿದೆ. ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದ 43 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಮೊದಲ ಹಂತದಲ್ಲಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಳಿಸುತ್ತಿದ್ದ ಕೆಲವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ5 ವರ್ಷದ ಬಾಲಕ ಸೇರಿದಂತೆ ಹಲವರು ಸೋಂಕಿತರಾಗಿದ್ದಾರೆ. ಉಳಿದವರ ಗಂಟಲ ದ್ರವದ ಮಾದರಿಯನ್ನು ಎರಡನೇ ಹಂತದಲ್ಲಿ ಕಳುಹಿಸಲಾಗುತ್ತದೆ.

35 ವರ್ಷದ ಮಹಿಳೆ, 16 ವರ್ಷದ ಯುವತಿ, 46 ವರ್ಷದ ಪುರುಷ, 34 ವರ್ಷದ ಪುರುಷ, 18 ವರ್ಷದ ಯುವಕ, 12 ವರ್ಷದ ಬಾಲಕಿ, 5 ವರ್ಷದ ಬಾಲಕ, 17 ವರ್ಷದ ಯುವಕ, 19 ವರ್ಷದ ಯುವತಿ, 30 ವರ್ಷದ ಪುರುಷ, 32 ವರ್ಷದ ಮಹಿಳೆ ಸೋಂಕಿತರಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಟಿನ್ ಟೌನ್‌ನಲ್ಲಿ ಸೋಂಕಿತ ಮಹಿಳೆಯ ಮೂರು ಮಕ್ಕಳಿಗೂ ಸೋಂಕು ತಗುಲಿದೆ. ಮಹಿಳೆಯ ಕುಟುಂಬದ ಏಳು ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇನ್ನೂ ನಾಲ್ವರು ಕ್ವಾರಂಟೈನ್‌ನಲ್ಲಿದ್ದಾರೆ.23 ವರ್ಷದ ತಾಯಿ ಹಾಗೂ ಅವರ 2 ವರ್ಷದ ಹೆಣ್ಣು ಮಗುವಿಗೂ ಸೋಂಕು ತಗುಲಿದೆ. ಅವರ ಪ್ರಯಾಣ ಹಿನ್ನೆಲೆ ಹಾಗೂ ಸಂಪರ್ಕಗಳನ್ನು ಪತ್ತೆ ಮಾಡಲಾಗುತ್ತಿದೆ.

ರೂಪೇನ ಅಗ್ರಹಾರದ 25 ವರ್ಷದ ಯುವತಿ ಹಾಗೂ ಎಚ್‌ಎಸ್‌ಆರ್ ಬಡಾವಣೆಯ 30 ವರ್ಷದ ಪುರುಷನಿಗೆ ಸೋಂಕು ತಗುಲಿದೆ.ರಾಜಸ್ಥಾನದ ಅಜ್ಮೇರ್‌ನಿಂದ ನಗರಕ್ಕೆ ಬಂದಿದ್ದ 46 ವರ್ಷದ ವ್ಯಕ್ತಿ ಹಾಗೂ ಅವರ 18 ವರ್ಷದ ಮಗನನ್ನು ಸಾಂಸ್ಥಿಕ ಕ್ವಾರಂಟೈನ್‌ಲ್ಲಿ ಇರಿಸಲಾಗಿತ್ತು. ಟೋಪಿ ವ್ಯಾಪಾರಿಗಳಾದ ಇವರಿಬ್ಬರಲ್ಲೂ ಸೋಂಕು ಇರುವುದು ಖಚಿತವಾಗಿದೆ.

21 ಮಂದಿ ಗುಣಮುಖ: ಗುಣಮುಖರಾಗಿರುವ 21 ಮಂದಿ ಆಸ್ಪತ್ರೆಯಿಂದ ಮನೆಗೆ ಶನಿವಾರ ತೆರಳಿದ್ದು, ಚೇತರಿಸಿಕೊಂಡವರ ಸಂಖ್ಯೆ 172ಕ್ಕೆ ತಲುಪಿದೆ. 156 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.