ಬೆಂಗಳೂರು: ಬೆಂಗಳೂರು ತಾಂತ್ರಿಕ ಶೃಂಗ(ಟೆಕ್ ಸಮಿಟ್) 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬೆಂಗಳೂರು ತಾಂತ್ರಿಕ ಶೃಂಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು ತಾಂತ್ರಿಕ ಶೃಂಗದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ನವೆಂಬರ್ ತಿಂಗಳಲ್ಲಿ ಬೆಂಗಳೂರು ತಾಂತ್ರಿಕ ಶೃಂಗ ಆಯೋಜಿಸಿರುವ ಪ್ರಯುಕ್ತ ವಿವಿಧ ವಲಯದ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಹಲವಾರು ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಕೈಗಾರಿಕೆಗಳಿಗೆ ಪೂರಕವಾದ ನೀತಿಗಳು, ಮೂಲಸೌಕರ್ಯ, ತಾಂತ್ರಿಕತೆಗಳ ಬಗ್ಗೆ ಬಹಳಷ್ಟು ಸಲಹೆಗಳನ್ನು ಕೈಗಾರಿಕೋದ್ಯಮಿಗಳು ನೀಡಿದ್ದು, ಅವುಗಳನ್ನು ಜಾರಿಗೊಳಿಸಲಾಗುವುದು ಎಂದರು.
ತಾಂತ್ರಿಕ ಕ್ಷೇತ್ರಕ್ಕೆ ಹೊಸ ಆಯಾಮ: ಬೆಂಗಳೂರು ಶೃಂಗ ತಾಂತ್ರಿಕ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವಲ್ಲಿ ಇಂದಿನ ಸಭೆ ಫಲಪ್ರದವಾಗಿದೆ. ಮುಂಬರುವ ದಿನಗಳಲ್ಲಿ ವಿವಿಧ ಕೈಗಾರಿಕಾ ವಲಯಗಳಿಗೂ ಸರ್ಕಾರ ಇಂಬು ನೀಡಲಿದೆ. ಬೆಂಗಳೂರನ್ನು ವಿಶ್ವದಲ್ಲಿಯೇ ನಂ.1 ಸಿಲಿಕಾನ್ ಸಿಟಿ ಮಾಡುವ ಚಿಂತನೆ ಸರ್ಕಾರಕ್ಕಿದೆ. ಬೆಂಗಳೂರಿನ ಹೊರವಲಯಗಳಲ್ಲಿಯೂ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.