ADVERTISEMENT

ಬೆಂಗಳೂರು | ಗಾಂಜಾ ಮಾರಾಟ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 21:04 IST
Last Updated 13 ಫೆಬ್ರುವರಿ 2022, 21:04 IST
ನಂದಿನಿ ಲೇಔಟ್ ಠಾಣೆ ಪೊಲೀಸರು ಜಪ್ತಿ ಮಾಡಿರುವ ಗಾಂಜಾ
ನಂದಿನಿ ಲೇಔಟ್ ಠಾಣೆ ಪೊಲೀಸರು ಜಪ್ತಿ ಮಾಡಿರುವ ಗಾಂಜಾ   

ಬೆಂಗಳೂರು: ಒಡಿಶಾದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಆರೋಪದಡಿ ಭದ್ರತಾ ಸಿಬ್ಬಂದಿ ಸೇರಿ ಮೂವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಒಡಿಶಾದ ಶಿಬ್ರಾಜ್, ನಗರದ ನಿವಾಸಿಗಳಾದ ರಾಘವೇಂದ್ರ, ನಾಗೇಶ್ ಬಂಧಿತರು. ಅವರಿಂದ 10 ಕೆ.ಜಿ ಗಾಂಜಾ ಹಾಗೂ ₹1,500 ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಶಿಬ್ರಾಜ್, ಸೆಕ್ಯುರಿಟಿ ಕಂಪನಿಯೊಂದಕ್ಕೆ ಸೇರಿದ್ದ. ಆತನನ್ನು ಕೆಲ ಕಚೇರಿಗಳಿಗೆ ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಲಾಗಿತ್ತು. ಆಗಾಗ ಆತ ಊರಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದ. ವಾಪಸು ಬರುವಾಗ ಬ್ಯಾಗ್‌ನಲ್ಲಿ ಗಾಂಜಾ ಪೊಟ್ಟಣ ಬಚ್ಚಿಟ್ಟುಕೊಂಡು ತರುತ್ತಿದ್ದ.’

ADVERTISEMENT

‘ಕೊಠಡಿಯಲ್ಲೇ ಶಿಬ್ರಾಜ್, ಗಾಂಜಾ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ. ಅದನ್ನೇ ರಾಘವೇಂದ್ರ ಹಾಗೂ ನಾಗೇಶ್ ಮಾರಾಟ ಮಾಡುತ್ತಿದ್ದರು. ಬಂದ ಹಣವನ್ನು ಆರೋಪಿಗಳು ಹಂಚಿಕೊಳ್ಳುತ್ತಿದ್ದರು’ ಎಂದೂ ತಿಳಿಸಿದರು.

ಯಶವಂತಪುರದಲ್ಲಿ ಇಬ್ಬರ ಬಂಧನ:
ಆಟೊದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

‘ಷರೀಫ್‌ನಗರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಗಾಂಜಾ ಸಾಗಿಸಲಾಗುತ್ತಿತ್ತು. ದಾಳಿ ಮಾಡಿ 3 ಕೆ.ಜಿ ಗಾಂಜಾ ಹಾಗೂ ₹ 600 ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಗಾಂಜಾ; ವಿದ್ಯಾರ್ಥಿಗಳನ್ನು ಹಿಡಿದುಕೊಟ್ಟ ಜನ

ಬೆಂಗಳೂರು: ನಗರದ ಕಾಲೇಜೊಂದರ ಇಬ್ಬರ ವಿದ್ಯಾರ್ಥಿಗಳ ಬಳಿ 1 ಕೆ.ಜಿ ಗಾಂಜಾ ಪತ್ತೆಯಾಗಿದ್ದು, ಅವರಿಬ್ಬರನ್ನು ಬ್ಯಾಡರಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ವಿದ್ಯಾರ್ಥಿಗಳಿಬ್ಬರು ದ್ವಿಚಕ್ರ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು, ಅವರಿಬ್ಬರನ್ನು ಹಿಡಿದುಕೊಂಡು ವಿಚಾರಿಸಿದ್ದರು. ವಿದ್ಯಾರ್ಥಿಗಳ ಜೇಬಿನಲ್ಲಿ ಗಾಂಜಾ ಪೊಟ್ಟಣಗಳು ಸಿಕ್ಕಿದ್ದವು. ಅವರಿಬ್ಬರನ್ನು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ವಶಕ್ಕೆ ಒಪ್ಪಿಸಲಾಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ವಿದ್ಯಾರ್ಥಿಗಳು ವಾಸವಿದ್ದ ಕೊಠಡಿಯಲ್ಲೂ ಪೊಲೀಸರು ತಪಾಸಣೆ ಮಾಡಿದರು. ವಿದ್ಯಾರ್ಥಿಗಳ ಬಳಿ ಒಟ್ಟು 1 ಕೆ.ಜಿ ಗಾಂಜಾ ಹಾಗೂ ಪೌಡರ್ ರೂಪದ ಡ್ರಗ್ಸ್ ಪತ್ತೆಯಾಗಿದೆ’ ಎಂದೂ ತಿಳಿಸಿದರು.

ಪೊಲೀಸರು, ‘ತನಿಖೆ ನಡೆದಿದೆ. ಸದ್ಯಕ್ಕೆ ವಿದ್ಯಾರ್ಥಿಗಳ ಹೆಸರು ಬಹಿರಂಗಪಡಿಸಲಾಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.