ADVERTISEMENT

ಆರ್‌.ಆರ್‌. ನಗರ: ಮೂವರ ಹೆಸರು ಶಿಫಾರಸು

ಜೆಡಿಎಸ್‌ ಅಭ್ಯರ್ಥಿ ಆಯ್ಕೆಯ ಹೊಣೆ ದೇವೇಗೌಡರ ಹೆಗಲಿಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 20:34 IST
Last Updated 2 ಅಕ್ಟೋಬರ್ 2020, 20:34 IST
   

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲಿ ಶುಕ್ರವಾರ ಸಭೆ ನಡೆಸಿದ ಪಕ್ಷದ ಮುಖಂಡರು, ಮೂವರು ಸಂಭವನೀಯರ ಹೆಸರನ್ನು ಶಿಫಾರಸು ಮಾಡಿದ್ದಾರೆ.

ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಮತ್ತು ಪಕ್ಷದ ಮುಖಂಡ ಜ್ಞಾನಭಾರತಿ ಕೃಷ್ಣಮೂರ್ತಿ ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಅಂತಿಮವಾಗಿ ಅಭ್ಯರ್ಥಿ ಆಯ್ಕೆಯ ಅಧಿಕಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಆರ್‌.ಆರ್‌. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಮುಖ ಮುಖಂಡರು ಹಾಗೂ ಬೆಂಗಳೂರು ನಗರದ ಕೆಲವು ಜೆಡಿಎಸ್‌ ಮುಖಂಡರ ಜತೆ ಕುಮಾರಸ್ವಾಮಿ ನೇರವಾಗಿ ಚರ್ಚೆ ನಡೆಸಿದರು. ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಮೂವರೂ ಈ ಸಭೆಯಲ್ಲಿದ್ದರು.

ADVERTISEMENT

ಮೂವರ ಬೆಂಬಲಿಗರೂ ಸಭೆಯಲ್ಲಿ ತಮ್ಮ ಮುಖಂಡರಿಗೇ ಟಿಕೆಟ್‌ ನೀಡುವಂತೆ ಆಗ್ರಹಿಸಿದ್ದಾರೆ. ಎಲ್ಲರನ್ನೂ ಸಮಾಧಾನಪಡಿಸಿದ ಕುಮಾರಸ್ವಾಮಿ, ಅಂತಿಮವಾಗಿ ಅಭ್ಯರ್ಥಿ ಆಯ್ಕೆಯ ನಿರ್ಧಾರವನ್ನು ದೇವೇಗೌಡರಿಗೆ ಬಿಡುವುದಾಗಿ ಪ್ರಕಟಿಸಿದ್ದಾರೆ. ಸೋಮವಾರ ಅಭ್ಯರ್ಥಿಯ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಅಪ್ಪಾಜಿಗೌಡ, ‘ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ. ಮೂವರು ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲು ತೀರ್ಮಾನಿಸಿದ್ದೇವೆ. ಅವರಲ್ಲಿ ಒಬ್ಬರನ್ನು ದೇವೇಗೌಡರು ಆಯ್ಕೆ ಮಾಡುತ್ತಾರೆ’ ಎಂದರು.

‘ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗೆ 50,000ಕ್ಕೂ ಹೆಚ್ಚು ಮತಗಳು ಲಭಿಸಿದ್ದವು. ಈಗ ಕ್ಷೇತ್ರದಲ್ಲಿ ಪಕ್ಷದ ಪರ ಇನ್ನೂ ಹೆಚ್ಚಿನ ಒಲವಿದೆ. ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ’ ಎಂದು ಹೇಳಿದರು.

ಅಮ್ಮಾಜಮ್ಮಗೆ ಟಿಕೆಟ್‌?: ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುವ ಸಂಬಂಧ ಜೆಡಿಎಸ್‌ ವರಿಷ್ಠರು ಚರ್ಚೆ ಮುಂದುವರಿಸಿದ್ದಾರೆ. ಶಾಸಕರಾಗಿದ್ದಾಲೇ ನಿಧನರಾದ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನೇ ಉಪ ಚುನಾವಣೆಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ದೇವೇಗೌಡರು ಒಲವು ತೋರಿದ್ದಾರೆ. ಬಹುತೇಕ ಸೋಮವಾರ ಅಭ್ಯರ್ಥಿಯ ಹೆಸರು ಪ್ರಕಟಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅ. 4, 5ರಂದು ಕಾಂಗ್ರೆಸ್‌ ಸಭೆ

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲು ಭಾನುವಾರ ಮತ್ತು ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಬೆಂಗಳೂರು ನಗರ ವ್ಯಾಪ್ತಿಯ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಪ್ರಮುಖ ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲರ ಜತೆ ಚರ್ಚಿಸಿದ ಬಳಿಕ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿಗೆ ರವಾನಿಸಲಾಗುತ್ತದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮುನಿರತ್ನಗೆ ಟಿಕೆಟ್‌: ಬಿ.ಸಿ.ಪಾಟೀಲ

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಮುನಿರತ್ನ ಅವರಿಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಂಬಿ ಬಂದವರನ್ನು ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೈಬಿಟ್ಟಿಲ್ಲ. ಮುನಿರತ್ನ ವಿಚಾರದಲ್ಲೂ ಆತಂಕ ಮತ್ತು ಅನುಮಾನಗಳಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.