ADVERTISEMENT

ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 20:21 IST
Last Updated 26 ಡಿಸೆಂಬರ್ 2018, 20:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲು 2,000ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾತ್ರಿ ವೇಳೆ ಡ್ರ್ಯಾಗ್‌ ರೇಸಿಂಗ್‌, ವ್ಹೀಲಿಂಗ್‌, ತ್ರಿಬಲ್‌ ರೈಡಿಂಗ್‌ ಮೇಲೆ ಪಾದಚಾರಿ ರಸ್ತೆಯಲ್ಲಿ ವಾಹನ ಚಾಲನೆ ಮಾಡಿದರೆ ಇವರು ಕ್ರಮ ಕೈಗೊಳ್ಳಲಿದ್ದಾರೆ.

ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ಸೇಂಟ್‌ ಮಾರ್ಕ್ಸ್‌ ರಸ್ತೆ, ರೆಸ್ಟ್‌ ಹೌಸ್‌ ರಸ್ತೆ, ಅನಿಲ್ ಕುಂಬ್ಳೆ ವೃತ್ತ, ಮೆಯೋಹಾಲ್, , ಮ್ಯೂಸಿಯಂ ರಸ್ತೆ, ಇನ್‌ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ರೆಸಿಡೆನ್ಸಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿ.31ರ ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 2 ಗಂಟೆವರೆಗೂ (ಜ.1ರ ಮುಂಜಾನೆ) ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ADVERTISEMENT

ಈ ಅವಧಿಯಲ್ಲಿ ಇಲ್ಲಿ ಪೊಲೀಸ್ ವಾಹನಗಳು, ತುರ್ತು ವಾಹನ ಹೊರತುಪಡಿಸಿ ಯಾವುದೇ ವಾಹನಗಳ ಸಂಚಾರ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ವಾಹನವನ್ನು ವಶಕ್ಕೆ ಪಡೆದು ದಂಡ ವಸೂಲಿ ಮಾಡಲಾಗುವುದು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಮಾರ್ಗ ಬದಲಾವಣೆ: ರಾತ್ರಿ 8 ಗಂಟೆ ನಂತರ ಕ್ವೀನ್ಸ್ ವೃತ್ತದ ಮುಖಾಂತರ ಹಲಸೂರು ಕಡೆ ಸಾಗುವ ವಾಹನಗಳು, ಅನಿಲ್ ಕುಂಬ್ಳೆ ವೃತ್ತದ ಬಿಆರ್‌ವಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು, ಸೆಂಟ್ರಲ್‌ ಸ್ಟ್ರೀಟ್‌–ಬಿ.ಆರ್‌.ವಿ ಜಂಕ್ಷನ್‌, ಕಬ್ಬನ್ ರಸ್ತೆ ಮೂಲಕ ಎಂ.ಜಿ. ರಸ್ತೆಯನ್ನು ಸೇರಿ ಸಾಗಬಹುದು.

ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ ಸೇರಬೇಕು. ಬಳಿಕ, ಎಡತಿರುವು ಪಡೆದು ಡಿಕನ್ಸನ್ ರಸ್ತೆ ಮುಖಾಂತರ ಕಬ್ಬನ್ ರಸ್ತೆಯತ್ತ ಹೋಗಬಹುದು.

ಕ್ಯಾಷ್‌ ಫಾರ್ಮಸಿ ಜಂಕ್ಷನ್‌ ಕಡೆಯಿಂದ ಹಳೇ ಪೊಲೀಸ್‌ ಠಾಣೆ ಜಂಕ್ಷನ್‌ ಮುಖಾಂತರ ಆಶೀರ್ವಾದ ವೃತ್ತದ ಮೂಲಕ ಒಪೇರಾ ಜಂಕ್ಷನ್‌ ಕಡೆ ಹೋಗುವ ವಾಹನಗಳು ಮ್ಯೂಸಿಯಂ ರಸ್ತೆ, ಎಸ್‌ಬಿಐ ಜಂಕ್ಷನ್‌, ಸೇಂಟ್‌ ಮಾರ್ಕ್ಸ್‌ ರಸ್ತೆ, ಅನಿಲ್‌ ಕುಂಬ್ಳೆ ವೃತ್ತ, ಬಿ.ಆರ್‌.ವಿ ಜಂಕ್ಷನ್‌ ಮೂಲಕ ಸಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.