BBMP
ಬೆಂಗಳೂರು: ಸಮುದಾಯದ ಪ್ರಾಣಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
ವಾಟ್ಸ್ ಆ್ಯಪ್, ಫೇಸ್‌ಬುಕ್ ಹಾಗೂ ಸಹಾಯಕ ನಿರ್ದೇಶಕರ ಮೊಬೈಲ್‌ಗೆ ಕರೆ ಮಾಡಿ ಸಮುದಾಯದ ಪ್ರಾಣಿಗಳ ಸಮಸ್ಯೆಯ ದೂರುಗಳನ್ನು ಸಾರ್ವಜನಿಕರು ದಾಖಲಿಸುತ್ತಿದ್ದಾರೆ. ಇದರಿಂದ ಕೂಡಲೇ ಗೊಂದಲಗಳಿಗೆ ಪರಿಹಾರ ಸಿಗುತ್ತಿಲ್ಲ. ಆಫ್‌ಲೈನ್‌ನಲ್ಲಿ ದೂರು ದಾಖಲಿಸುವುದರಿಂದ ನಿರ್ವಹಣೆಯಲ್ಲಿ ಸಮಸ್ಯೆ ಉಂಟಾಗಿದೆ. ಆದ್ದರಿಂದ, ತ್ವರಿತವಾಗಿ ದೂರುಗಳನ್ನು ಪರಿಹರಿಸಲು, ಸಹಾಯವಾಣಿ 1533 ಹಾಗೂ ‘ನಮ್ಮ ಬೆಂಗಳೂರು’ ಆ್ಯಪ್ ಮೂಲಕ ದೂರು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಸಹಾಯವಾಣಿಯಲ್ಲಿ ಇದೀಗ ಅಧಿಕ ವಿವರವಾದ ಮಾಹಿತಿ, ವರ್ಗಗಳನ್ನು ಸೇರಿಸಲಾಗಿದೆ. ಪ್ರಾಣಿಗಳ ಜನನ ನಿಯಂತ್ರಣ, ರೇಬೀಸ್ ನಿರೋಧಕ ಲಸಿಕೆಗೆ ವಿನಂತಿ, ನಾಯಿ ಕಡಿತ ನಿರ್ವಹಣೆಯಂತಹ ಸಾಮಾನ್ಯ ದೂರುಗಳ ಹೊರತು, ಪ್ರಾಣಿಗಳಿಗೆ ಆಹಾರ ನೀಡುವವರಿಗೆ ಕಿರುಕುಳ, ಪ್ರಾಣಿಗಳ ಮೇಲಿನ ಕ್ರೌರ್ಯ, ಪ್ರಾಣಿಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಬಹುದು.
ನಾಗರಿಕರು ಮನವಿ ಸಲ್ಲಿಸಿದ ನಂತರ ಅದಕ್ಕೆ ಪ್ರತಿಕ್ರಿಯೆ ಅಥವಾ ಪರಿಹರಿಸುವ ಅವಧಿ ನಿಗದಿ ಮಾಡಲಾಗಿದೆ. ಪ್ರಾಣಿಗಳ ಜನನ ನಿಯಂತ್ರಣ ಮತ್ತು ರೇಬೀಸ್ ನಿರೋಧಕ ಲಸಿಕೆ ವಿನಂತಿಗಳಿಗೆ ಐದು ದಿನಗಳೊಳಗೆ ಸ್ಪಂದಿಸಲಾಗುವುದು. ನಾಯಿ ಕಡಿತ / ಜಾನುವಾರು ದಾಳಿಗೆ ಸಂಬಂಧಿಸಿದ ಮನವಿ ಪರಿಹಾರಕ್ಕೆ ಎರಡು ದಿನ, ವಸತಿ ಸಂಘಗಳು ಅಥವಾ ವ್ಯಕ್ತಿಗಳಿಂದ ಆಹಾರ ನೀಡುವವರಿಗೆ ಕಿರುಕುಳ ಸಮಸ್ಯೆಗೆ ಎರಡು ದಿನ, ಬ್ರೀಡರ್, ಪೆಟ್ ಶಾಪ್, ಮಾಂಸದ ಅಂಗಡಿ ಪರವಾನಗಿಯನ್ನು ಏಳು ದಿನಗಳಲ್ಲಿ, ಪ್ರಾಣಿ ಹಿಂಸೆ ದೂರುಗಳನ್ನು ಎರಡು ದಿನಗಳಲ್ಲಿ ಪರಿಹರಿಸಲಾಗುತ್ತದೆ ಎಂದು ಸುರಳ್ಕರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.