ADVERTISEMENT

ರಾಷ್ಟ್ರೀಯ ಪಕ್ಷಗಳ ನಾಯಕರ ಗುಲಾಮಗಿರಿಗೆ ಸಾಕ್ಷಿ: ಅಬ್ರಾಹಾಂ

ಹೊರಗಿನವರಿಗೆ ರಾಜ್ಯಸಭೆ ಟಿಕೆಟ್: ಅಬ್ರಹಾಂ.ಟಿ.ಜಿ. ಖಂಡನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 20:18 IST
Last Updated 3 ಜೂನ್ 2022, 20:18 IST

ಬೆಂಗಳೂರು: ‘ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಪ್ರತಿನಿಧಿಸುವ ರಾಜ್ಯದ ನಾಯಕರಿಗೆ ರಾಜ್ಯಸಭೆಗೆ ಆಯ್ಕೆಯಾಗುವ ಯೋಗ್ಯತೆಯಿಲ್ಲವೇ’ ಎಂದು ಸಾಮಾಜಿಕ ಹೋರಾಟಗಾರ ಅಬ್ರಹಾಂ ಟಿ.ಜಿ ಪ್ರಶ್ನಿಸಿದರು.

ರಾಜ್ಯದ ರಾಷ್ಟ್ರೀಯ ಪಕ್ಷಗಳ ಮುಖಂಡರಿಗೆ ರಾಜ್ಯಸಭೆಯ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನರಸತ್ತ ಬಿಜೆಪಿ ಸರ್ಕಾರದ ನಾಯಕರಿಗೆ ಧಮ್ ಇದ್ದರೆ, ರಾಜ್ಯದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಮತ ಹಾಕಿ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ, ಪಿ.ರಾಜೀವ್ ಮತ್ತು ಮಾಧುಸ್ವಾಮಿಯವರಿಗೆ ಸವಾಲು ಹಾಕಿದರು.

ADVERTISEMENT

‘ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಶಾಸಕರಿಗೆ ರಾಜ್ಯದ ಬಗ್ಗೆ ಸ್ವಾಭಿಮಾನ, ಆತ್ಮಗೌರವವಿದ್ದರೆ, ಹೊರ ರಾಜ್ಯದ ಅಭ್ಯರ್ಥಿಗಳನ್ನು ತಿರಸ್ಕರಿಸಿ, ರಾಜ್ಯ ಕಾಂಗ್ರೆಸ್ ‍ಪಕ್ಷದ 2ನೇ ನಾಮ ನಿರ್ದೇಶಿತ ಅಭ್ಯರ್ಥಿ ಹಾಗೂ ಬಿಜೆಪಿ 3ನೇ ನಾಮ ನಿರ್ದೇಶಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯಕ್ಕೆ 2020–21, 2021–22 ಮೇ 31ರವೆಗೆ ಒಟ್ಟು 14,881 ಕೋಟಿ ಜಿಎಸ್‌ಟಿ ಪಾಲು ಬರಬೇಕಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ 8,633 ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದಾರೆ.
ಇನ್ನೂ 6,248 ಕೋಟಿಜಿಎಸ್‌ಟಿ ಪರಿಹಾರದ ಹಣ ಬಾಕಿ ಇದೆ.

‘15ನೇ ಹಣಕಾಸು ಆಯೋಗವು 2020–21ನೇ ಸಾಲಿನಲ್ಲಿ ರಾಜ್ಯದ ₹5,495 ಕೋಟಿ ವಿಶೇಷ ಅನುದಾನದ ಪ್ರಸ್ತಾವನೆಯನ್ನು ಇದೇ ನಿರ್ಮಲಾ ಸೀತಾರಾಮನ್‌ ತಿರಸ್ಕರಿಸಿದ್ದರು. ಇಂತಹ ರಾಜ್ಯದ್ರೋಹಿಯನ್ನು ಮತ್ತೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವುದು ರಾಜ್ಯ ಬಿಜೆಪಿ ನಾಯಕರ ಗುಲಾಮಗಿರಿಗೆ ಸಾಕ್ಷಿ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.