ADVERTISEMENT

ಮೈಸೂರು ರಸ್ತೆ ಸುತ್ತಮುತ್ತ ಮಾರ್ಗ ಬದಲಾವಣೆ

ಗಾಳಿ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ: ವಾಹನ ದಟ್ಟಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 16:31 IST
Last Updated 17 ಏಪ್ರಿಲ್ 2024, 16:31 IST
ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೈಕ್‌ ಹೊರತು ಪಡಿಸಿ ಎಲ್ಲ ಮಾದರಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರಿಂದ ಸೇತುವೆಯ ಕೆಳ ಭಾಗದ ರಸ್ತೆಯಲ್ಲಿ ಕಂಡುಬಂದ ವಾಹನ ದಟ್ಟಣೆ. – ಪ್ರಜಾವಾಣಿ ಚಿತ್ರ
ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೈಕ್‌ ಹೊರತು ಪಡಿಸಿ ಎಲ್ಲ ಮಾದರಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರಿಂದ ಸೇತುವೆಯ ಕೆಳ ಭಾಗದ ರಸ್ತೆಯಲ್ಲಿ ಕಂಡುಬಂದ ವಾಹನ ದಟ್ಟಣೆ. – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆಯಲಿರುವ ಗಾಳಿ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವದ ಕಾರ್ಯಕ್ರಮಗಳಿಗೆ ಹೆಚ್ಚಿನ ಭಕ್ತರು ಸೇರಲಿದ್ದು, ಇದೇ 18 ಹಾಗೂ 19ರಂದು ಮೈಸೂರು ರಸ್ತೆಯ ಸುತ್ತಮುತ್ತಲ ಮಾರ್ಗಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ 18ರ ಬೆಳಿಗ್ಗೆ 6ರಿಂದ 19ರ ಬೆಳಿಗ್ಗೆ 10ರವರೆಗೆ ಹಲವು ರಸ್ತೆಗಳಲ್ಲಿ  ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕೆಂಗೇರಿ ಕಡೆಯಿಂದ ಮೈಸೂರು ರಸ್ತೆಯ ಮೂಲಕ ನಗರ ಪ್ರವೇಶಿಸುವ ಎಲ್ಲ ಮಾದರಿಯ ವಾಹನಗಳನ್ನು ಕಿಂಕೊ ಜಂಕ್ಷನ್‌ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್‌ ವರೆಗೆ ರಸ್ತೆಯ ಎರಡೂ ಕಡೆ ತಾತ್ಕಾಲಿಕ ನಿರ್ಬಂಧಿಸಲಾಗಿದೆ.

ADVERTISEMENT

ಮೆಜೆಸ್ಟಿಕ್‌ ಮತ್ತು ಸಿಟಿ ಮಾರುಕಟ್ಟೆ ಕಡೆಯಿಂದ ಮೈಸೂರು ರಸ್ತೆಯ ಮೂಲಕ ಕೆಂಗೇರಿ ಮತ್ತು ಮೈಸೂರು ಕಡೆಗೆ ತೆರಳುವ ಎಲ್ಲ ಮಾದರಿಯ ವಾಹನಗಳನ್ನು ಹೊಸಗುಡ್ಡದಹಳ್ಳಿ ಜಂಕ್ಷನ್‌ನಿಂದ ಕಿಂಕೊ ಜಂಕ್ಷನ್‌ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ 1:

ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮೂಲಕ ನಗರ ಪ್ರವೇಶಿಸುವ ಎಲ್ಲ ಮಾದರಿ ವಾಹನಗಳು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದುಕೊಳ್ಳಬೇಕು. ನಾಗರಬಾವಿ ಜಂಕ್ಷನ್‌ ಹತ್ತಿರ ಬಲಕ್ಕೆ ತಿರುವು ಪಡೆದು ಚಂದ್ರಾಲೇಔಟ್‌ನ 80 ಅಡಿ ರಸ್ತೆಯಲ್ಲಿ ಸಾಗಿ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಮೂಲಕ ಮುಂದಕ್ಕೆ ಸಾಗಬಹುದು. ನಂತರ, ಎಂಸಿ ಸರ್ಕಲ್‌ ಬಳಿ ಬಲಕ್ಕೆ ತರುವು ಪಡೆದು ಮಾಗಡಿ ರಸ್ತೆಯ ಮೂಲಕ ತೆರಳಬಹುದು.

ಮೆಜೆಸ್ಟಿಕ್‌ ಕಡೆಗೆ ಹೋಗುವ ವಾಹನಗಳು ಹುಣಸೇಮರ ಜಂಕ್ಷನ್‌ ಬಳಿ ಎಡಕ್ಕೆ ತಿರುವು ಪಡೆದು ಕೆ.ಬಿ.ಜಂಕ್ಷನ್‌ ಮೂಲಕ ಸಾಗಿ ಖೋಡೆ ಸರ್ಕಲ್‌ ತಲುಪಿ ಅಲ್ಲಿಂದ ಮೆಜೆಸ್ಟಿಕ್‌ ಕಡೆಗೆ ತೆರಳಬಹುದು.

ಸಿಟಿ ಮಾರುಕಟ್ಟೆಗೆ ತೆರಳುವ ವಾಹನ ಸವಾರರು ಹುಣಸೇಮರ ಜಂಕ್ಷನ್‌ ಬಳಿ ಬಲಕ್ಕೆ ತಿರುವ ಪಡೆದು ಬಿನ್ನಿಮಿಲ್‌ ಜಂಕ್ಷನ್‌ ಸರ್ಕಲ್‌ ಬಳಿ ಎರಡಕ್ಕೆ ತಿರುವು ಪಡೆದು ಮಾರುಕಟ್ಟೆ ತಲುಪಬಹುದು.

ಪರ್ಯಾಯ ಮಾರ್ಗ– 2:

ನಾಯಂಡಹಳ್ಳಿ, ಬಿಎಚ್‌ಇಎಲ್‌ ಮತ್ತು ಮೈಸೂರು ರಸ್ತೆ ಮೂಲಕ ಮೆಜೆಸ್ಟಿಕ್‌ ಮತ್ತು ಸಿಟಿ ಮಾರುಕಟ್ಟೆಗೆ ಬರುವ ವಾಹನಗಳು ಕಿಂಕೊ ಜಂಕ್ಷನ್‌ ಬಳಿ ಎಡಕ್ಕೆ ತಿರುವು ಪಡೆದು ಅತ್ತಿಗುಪ್ಪೆ ಜಂಕ್ಷನ್‌, ವಿಜಯನಗರ ಬಸ್‌ ನಿಲ್ದಾಣ ಮೂಲಕ ಎಂಸಿ ಸರ್ಕಲ್‌ನಲ್ಲಿ ಬಲಕ್ಕೆ ತಿರುವು ಪಡೆದು ಮಾಗಡಿ ಮುಖ್ಯರಸ್ತೆಯ ಮೂಲಕ ಸಾಗಬಹುದು.

ಮೆಜೆಸ್ಟಿಕ್‌ಗೆ ಹೋಗುವ ವಾಹನಗಳು ಹುಣಸೇಮರ ಜಂಕ್ಷನ್‌ ಬಳಿ ಎಡ ತಿರುವು ಪಡೆದು ಕೆಬಿ ಜಂಕ್ಷನ್‌ ಮೂಲಕ ಸಾಗಿ ಖೋಡೆ ಸರ್ಕಲ್‌ ತಲುಪಿ ಮೆಜೆಸ್ಟಿಕ್‌ಗೆ ತೆರಳಬಹುದು.

ಸಿಟಿ ಮಾರುಕಟ್ಟೆಗೆ ಹೋಗುವ ವಾಹನ ಸವಾರರು ಹುಣಸೇಮರ ಜಂಕ್ಷನ್‌ ಬಳಿ ಬಲಕ್ಕೆ ತಿರುವು ಪಡೆದು ಬಿನ್ನಿಮಿಲ್‌ ಜಂಕ್ಷನ್‌ ಮೂಲಕ ಸಿರ್ಸಿ ಸರ್ಕಲ್‌ ಬಳಿ ಎಡಕ್ಕೆ ತಿರುವು ಪಡೆದು ಮಾರುಕಟ್ಟೆಗೆ ತಲುಪಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ಧಾರೆ.

ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ

ಕಾಮಗಾರಿ ಸಂಬಂಧ ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೈಕ್‌ ಹೊರತು ಪಡಿಸಿ ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಿರುವ ಪರಿಣಾಮ ಬುಧವಾರ ಕೆಳರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಹೆಬ್ಬಾಳ– ಕೆ.ಆರ್.ಪುರ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್‌ ಅಳವಡಿಸುವ ಕಾಮಗಾರಿ ಆರಂಭವಾಗಿದ್ದು ವಾಹನ ಸಂಚಾರ ನಿಷೇಧಿಸಲಾಗಿದೆ. ಆರು ತಿಂಗಳು ಕಾಮಗಾರಿ ನಡೆಯಲಿದೆ ಎಂದು ಗುತ್ತಿಗೆದಾರರು ತಿಳಿಸಿದ್ದು ವಾಹನ ಸಂಚಾರ ನಿರ್ಬಂಧಿಸಿದ ಮೊದಲ ದಿನವೇ ವಾಹನ ದಟ್ಟಣೆಯಿಂದ ವಾಹನ ಸವಾರರು ಹೈರಾಣಾದರು. ‘ಕೆ.ಆರ್.ಪುರ ನಾಗವಾರ ಕಡೆಯಿಂದ ಬಂದು ಮೇಖ್ರಿ ವೃತ್ತಕ್ಕೆ ಹೋಗುವ ಅಪ್‌ ರ್‍ಯಾಂಪ್‌ ಮೇಲೆ ದ್ವಿಚಕ್ರ ವಾಹನ ಹೊರತುಪಡಿಸಿ ಉಳಿದ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.