ADVERTISEMENT

ರಾಜಭವನ ಚಲೋ: ದಟ್ಟಣೆಯಿಂದ ಹೈರಾಣಾದ ಜನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 17:35 IST
Last Updated 20 ಜನವರಿ 2021, 17:35 IST
ಬಳ್ಳಾರಿ ರಸ್ತೆಯಲ್ಲಿ ಮೇಕ್ರಿ ವೃತ್ತದ ಬಳಿ ರ‍್ಯಾಲಿ ವೇಳೆ ಕಂಡುಬಂದ ವಾಹನದಟ್ಟಣೆ –ಪ್ರಜಾವಾಣಿ ಚಿತ್ರ
ಬಳ್ಳಾರಿ ರಸ್ತೆಯಲ್ಲಿ ಮೇಕ್ರಿ ವೃತ್ತದ ಬಳಿ ರ‍್ಯಾಲಿ ವೇಳೆ ಕಂಡುಬಂದ ವಾಹನದಟ್ಟಣೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್‌ ಪಕ್ಷ ಹಾಗೂ ರೈತರಿಂದ ಬುಧವಾರ ಹಮ್ಮಿಕೊಂಡಿದ್ದ ‘ರಾಜಭವನ ಚಲೋ’ ಹಾಗೂ ರ‍್ಯಾಲಿಯ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ಸಂಜೆವರೆಗೆ ವಾಹನ ದಟ್ಟಣೆಯಿಂದ ಜನರು ಹೈರಾಣಾದರು.

ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ವಿವಿಧ ರೈತ ಸಂಘಟನೆಗಳು ಭಾಗವಹಿಸಿದ್ದವು.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆರ‍್ಯಾಲಿ ಆರಂಭಗೊಂಡಿದ್ದರಿಂದ ಕೆಂಪೇಗೌಡ ಬಸ್‌ ನಿಲ್ದಾಣದಿಂದ ತೆರಳಿದ ಬಸ್‌ಗಳು ಗಂಟೆಗಟ್ಟಲೆ ರಸ್ತೆಯಲ್ಲೇ ನಿಲ್ಲಬೇಕಾಯಿತು. ವಿವಿಧ ಉದ್ದೇಶಗಳಿಗಾಗಿ ನಗರದ ಬೇರೆ ಸ್ಥಳಗಳಿಗೆ ತೆರಳಬೇಕಿದ್ದ ಪ್ರಯಾಣಿಕರಿಗೆದಟ್ಟಣೆಯಿಂದ ಸಮಸ್ಯೆಯಾಯಿತು.

ADVERTISEMENT

ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾಕಾರರುರ‍್ಯಾಲಿ ನಡೆಸಿದ್ದರಿಂದ ಇದೇ ಮಾರ್ಗದಲ್ಲಿ ಸಂಚರಿಸಬೇಕಿದ್ದ ವಿಧಾನಸೌಧ, ಶಿವಾಜಿನಗರ, ಹಲಸೂರು, ಹೊಸಕೋಟೆ, ಮಾರತ್ತಹಳ್ಳಿ, ವೈಟ್‍ಫೀಲ್ಡ್, ಜೆ.ಪಿ.ನಗರ, ಕೆ.ಆರ್.ಮಾರುಕಟ್ಟೆ, ಬನಶಂಕರಿ, ಜಯನಗರ, ಬಸವನಗುಡಿ ಸೇರಿದಂತೆ ಸಾವಿರಾರು ಬಸ್‌ಗಳು ಗಂಟೆಗಟ್ಟಲೆ ನಿಲ್ಲಬೇಕಾಯಿತು.

ರ‍್ಯಾಲಿಗೆಬೇರೆ ಬೇರೆ ಜಿಲ್ಲೆಗಳಿಂದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಲ್ಲಿ ಬಂದಿದ್ದರಿಂದ ನಗರವನ್ನು ಪ್ರವೇಶಿಸುವ ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ವಾಹನದಟ್ಟಣೆ ಹೆಚ್ಚಾಗಿತ್ತು.

ಹೆಬ್ಬಾಳದಿಂದ ಆರಂಭಗೊಂಡು ಮೇಕ್ರಿ ವೃತ್ತ, ಸಿಬಿಐ, ಅರಮನೆ ಮೈದಾನ ಮುಂದಿನ ರಸ್ತೆ, ಗುಟ್ಟಹಳ್ಳಿ ಚಾಲುಕ್ಯ ವೃತ್ತ, ಕುಮಾರಕೃಪಾ, ರೇಸ್‌ಕೋರ್ಸ್‌ ರಸ್ತೆಯವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂದ ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಧ್ಯಾಹ್ನದ ವೇಳೆಗೆ ದಟ್ಟಣೆ ಕಡಿಮೆಯಾದರೂ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸಂಚಾರಕ್ಕೆ ಬಳಸುವಂತೆ ಸೂಚಿಸಿದ್ದರು. ಕಾರ್ಪೊರೇಷನ್, ವಿಧಾನಸೌಧ, ಬನಶಂಕರಿಯತ್ತ ತೆರಳುವ ವಾಹನಗಳ ಸಂಚಾರದ ಮಾರ್ಗ ಬದಲಾಯಿಸಲಾಗಿತ್ತು. ಓಕಳಿಪುರ ಜಂಕ್ಷನ್‌ಗೆ ವಾಹನಗಳಿಗೆ ಪ್ರವೇಶ ಇರಲಿಲ್ಲ. ಶಾಂತಲಾ ಸಿಲ್ಕ್‌ನಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಬರುವ ವಾಹನಗಳಿಗೂ ಪರ್ಯಾಯ ಮಾರ್ಗ ಸೂಚಿಸಲಾಗಿತ್ತು. ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸರು ಸಂಜೆವರೆಗೂ ಹರಸಾಹಸ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.