ADVERTISEMENT

‘ಬೆತ್ತಲೆ’ ವ್ಯಕ್ತಿಗೆ ಬಟ್ಟೆ ತೊಡಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:20 IST
Last Updated 21 ಜೂನ್ 2019, 19:20 IST
ಬೆತ್ತಲಿದ್ದ ವ್ಯಕ್ತಿಗೆ ಬಟ್ಟೆ ತೊಡಿಸುತ್ತಿರುವ ಕಾನ್‌ಸ್ಟೆಬಲ್ 
ಬೆತ್ತಲಿದ್ದ ವ್ಯಕ್ತಿಗೆ ಬಟ್ಟೆ ತೊಡಿಸುತ್ತಿರುವ ಕಾನ್‌ಸ್ಟೆಬಲ್    

ಬೆಂಗಳೂರು: ಹೊರಮಾವು ಜಂಕ್ಷನ್‌ ಕೆಳ ಸೇತುವೆಯಲ್ಲಿ ‘ಬೆತ್ತಲೆ’ ಆಗಿ ಕುಳಿತಿದ್ದ ವ್ಯಕ್ತಿಯೊಬ್ಬರಿಗೆ ಸಂಚಾರ ಪೊಲೀಸರು ಬಟ್ಟೆ ತೊಡಿಸಿ ಆರೈಕೆ ಮಾಡಿದ್ದು, ಆ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿತ್ಯವೂ ಸಾವಿರಾರು ವಾಹನಗಳು ಓಡಾಡುವ ರಸ್ತೆಯ ಪಕ್ಕದ ಕಲ್ಲಿನ ಮೇಲೆ ಮೂರು ದಿನಗಳಿಂದ ವ್ಯಕ್ತಿ ಕುಳಿತಿದ್ದರು. ಊಟವನ್ನೂ ಮಾಡಿರಲಿಲ್ಲ. ಅದನ್ನು ಗಮನಿಸಿದ್ದ ಬಾಣಸವಾಡಿ ಸಂಚಾರ ಠಾಣೆ ಕಾನ್‌ಸ್ಟೆಬಲ್‌ಗಳಾದಅತೀಕ್ ಅಹ್ಮದ್‌ ಆ ವ್ಯಕ್ತಿ ಬಳಿ ಹೋಗಿ ವಿಚಾರಿಸಿದ್ದರು.

ಮೈ ಮೇಲೆ ಬಟ್ಟೆಯೇ ಇಲ್ಲದ ವ್ಯಕ್ತಿ ಮಾತನಾಡಲು ಹಿಂಜರಿಯುತ್ತಿದ್ದರು. ಆತನ ಸ್ಥಿತಿ ಕಂಡು ಮರುಕಪಟ್ಟ ಅತೀಕ್, ಹೊಸ ಬಟ್ಟೆ ತಂದು ತಮ್ಮ ಸಹೋದ್ಯೋಗಿ ನಯಾಜ್ ಬಾಷಾ ಹಾಗೂ ಸ್ಥಳೀಯ ಯುವಕ ಗೋಪಿ ಎಂಬುವರ ಸಹಾಯದಿಂದ ವ್ಯಕ್ತಿಗೆ ತೊಡಿಸಿದರು. ಬಳಿಕ ಹೋಟೆಲೊಂದಕ್ಕೆ ಕರೆದೊಯ್ದು ಊಟ ಸಹ ಮಾಡಿಸಿದ್ದರು.

ADVERTISEMENT

ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಸ್ಥಳೀಯರು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದನ್ನು ವೀಕ್ಷಿಸಿದ ಸಾರ್ವಜನಿಕರು, ಪೊಲೀಸರ ಮಾನವೀಯತೆಯನ್ನು ಹೊಗಳುತ್ತಿದ್ದಾರೆ.

ಧರ್ಮಪುರಿಯ ವ್ಯಕ್ತಿ: ‘ಹೊರಮಾವು ಜಂಕ್ಷನ್‌ನಿಂದ ಬಾಬುಸಾಪಾಳ್ಯ ಕಡೆಗಿನ ರಸ್ತೆಯಲ್ಲಿ ಗುರುವಾರ ಸಂಚಾರ ದಟ್ಟಣೆ ಉಂಟಾಗಿತ್ತು. ಅದನ್ನು ನಿಯಂತ್ರಿಸಲು ಕೆಳ ಸೇತುವೆ ಕಡೆ ಹೋಗಿದ್ದೆ. ಅಲ್ಲಿಯೇ ವ್ಯಕ್ತಿ ಕುಳಿತಿದ್ದು ಕಂಡಿತು. ಆಗಾಗ ವಾಹನಗಳ ಎದುರು ಹೋಗಿ ಆತ ನಿಲ್ಲುತ್ತಿದ್ದ. ಆಕಸ್ಮಾತ್ ಅಪಘಾತ ಸಂಭವಿಸಿದರೆ ಆತ ಮೃತಪಡಬಹುದೆಂಬ ಭಯ ಇತ್ತು’ ಎಂದು ಅತೀಕ್ ಅಹ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಸ್ವಸ್ಥಗೊಂಡಿದ್ದ ವ್ಯಕ್ತಿ, ತನ್ನದು ಧರ್ಮಪುರಿ ಎಂದಷ್ಟೇ ಹೇಳುತ್ತಿದ್ದ. ಬಟ್ಟೆ ತೊಡಿಸಿ ಊಟ ಮಾಡಿಸಿದ ನಂತರ ಊರಿಗೆ ಹೋಗುವಂತೆ ಹೇಳಿ ಹಣವನ್ನು ಕೊಟ್ಟು ಕಳುಹಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.