ADVERTISEMENT

33 ದಿನ ಆರೈಕೆ: ಯುವಕನ ಬದುಕಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 7:34 IST
Last Updated 29 ಸೆಪ್ಟೆಂಬರ್ 2020, 7:34 IST

ಬೆಂಗಳೂರು: ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಸಂಜಯ್ (32) ಎಂಬುವರನ್ನು ಆಸ್ಪತ್ರೆಗೆ ಸೇರಿಸಿ 33 ದಿನ ಆರೈಕೆ ಮಾಡಿ ಎಚ್‌ಎಎಲ್ ಸಂಚಾರ ಠಾಣೆ ಪೊಲೀಸರು ಪ್ರಾಣ ಉಳಿಸಿದ್ದಾರೆ.

‘ಮಹಾರಾಷ್ಟ್ರದ ಸಂಜಯ್, ಕೆಲಸಕ್ಕಾಗಿ ನಗರಕ್ಕೆ ಬಂದಿದ್ದರು. ಆಗಸ್ಟ್ 16ರಂದು ಮಾರತ್ತಹಳ್ಳಿ ಮೇಲ್ಸೇತುವೆ ಸಮೀಪ ನಡೆದುಕೊಂಡು ಹೊರಟಿದ್ದಾಗ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞೆ ಹೋಗಿತ್ತು. ಎಚ್‌ಎಎಲ್ ಸಂಚಾರ ಪೊಲೀಸರೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಪೂರ್ವ ವಿಭಾಗದ (ಸಂಚಾರ) ಡಿಸಿಪಿ ನಾರಾಯಣ್ ತಿಳಿಸಿದರು.

‘ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸಂಜಯ್ 33 ದಿನಗಳವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇತ್ತೀಚೆಗಷ್ಟೇ ಅವರಿಗೆ ಪ್ರಜ್ಞೆ ಬಂದಿದ್ದು, ತಮ್ಮೂರಿನ ಬಗ್ಗೆ ಮಾಹಿತಿ ನೀಡಿದ್ದರು. ಕುಟುಂಬಸ್ಥರನ್ನು ನಗರಕ್ಕೆ ಕರೆಸಿಕೊಂಡು ಅವರ ಜೊತೆಯಲ್ಲಿ ಊರಿಗೆ ಕಳುಹಿಸಿಕೊಡಲಾಗಿದೆ’ ಎಂದೂ ಹೇಳಿದರು.

ADVERTISEMENT

‘ಠಾಣೆಯ ಇನ್‌ಸ್ಪೆಕ್ಟರ್ ಚನ್ನೇಶ್, ಕಾನ್‌ಸ್ಟೆಬಲ್ ಶ್ರೀಕಾಂತ್ ಹಾಗೂ ಇತರರು ಯುವಕನಿಗೆ ಚಿಕಿತ್ಸೆ ಕೊಡಿಸಿ ನಿತ್ಯವೂ ಆಸ್ಪತ್ರೆಗೆ ಹೋಗಿ ಸಂಬಂಧಿಕರಾಗಿ ಆರೈಕೆ ಮಾಡಿದ್ದಾರೆ. ಅವರ ಕೆಲಸ ಮೆಚ್ಚುವಂಥದ್ದು’ ಎಂದೂ ಹೊಗಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.