ADVERTISEMENT

ಬೆಂಗಳೂರು: ಎಂಟನೇ ಮೈಲಿಯಲ್ಲಿ ಸಂಚಾರ ಸಂಕಟ

ದಟ್ಟಣೆ ನಡುವೆ ಜನರು ಹೈರಾಣ, ಪರ್ಯಾಯ ಮಾರ್ಗಕ್ಕೆ ಮನವಿ

ಗಾಣಧಾಳು ಶ್ರೀಕಂಠ
Published 13 ಅಕ್ಟೋಬರ್ 2024, 23:43 IST
Last Updated 13 ಅಕ್ಟೋಬರ್ 2024, 23:43 IST
8ನೇ ಮೈಲಿ ಸಮೀಪದಲ್ಲಿ ಸಂಚಾರ ದಟ್ಟಣೆ (ಸಂಗ್ರಹ ಚಿತ್ರ)
8ನೇ ಮೈಲಿ ಸಮೀಪದಲ್ಲಿ ಸಂಚಾರ ದಟ್ಟಣೆ (ಸಂಗ್ರಹ ಚಿತ್ರ)   

ಬೆಂಗಳೂರು: ‘ಸಿಗ್ನಲ್‌ ನೋಡ್ಕೊಂಡು, ಕೈಯಲ್ಲಿ ಜೀವ ಹಿಡ್ಕೊಂಡು ರಸ್ತೆ ದಾಟಬೇಕು. ರಸ್ತೆ ದಾಟಿ ಆ ಬದಿಗೆ ಹೋದರೆ ನಿಲ್ಲೋಕೂ ಜಾಗವಿರುವುದಿಲ್ಲ, ಫುಟ್‌ಪಾತ್‌ನಲ್ಲೂ ವಾಹನಗಳ ಸಾಲು. ಸ್ವಲ್ಪ ಹೊತ್ತು ನಿಂತು ಹೊರಡೋಣಾ ಅಂದರೆ, ವಾಹನಗಳ ಹಾರನ್‌, ಹೊಗೆ, ದೂಳು.. ಅಬ್ಬಾ! ತಲೆ ಚಿಟ್ ಹಿಡಿಯುತ್ತದೆ... ಬೆಳಿಗ್ಗೆ– ಸಂಜೆಯ ಓಡಾಟ ನಿಜಕ್ಕೂ ನರಕಯಾತನೆ...’

ತುಮಕೂರು ರಸ್ತೆಯ 8ನೇ ಮೈಲಿ ಜಂಕ್ಷನ್‌ನಲ್ಲಿ ರಸ್ತೆ ದಾಟುವ ಬಹುತೇಕ ನಾಗರಿಕರ ನೋವು, ಹತಾಶೆಯ ನುಡಿಗಳಿವು. ಈ ಸಮಸ್ಯೆ ಬಹಳ ವರ್ಷಗಳಿಂದ ಇದೆ. ಆದರೆ, ಒಂದೆರಡು ವರ್ಷಗಳಿಂದೀಚೆಗೆ ವಾಹನಗಳ ಸಂಚಾರ ಹೆಚ್ಚಾದಂತೆ, ಸಮಸ್ಯೆಗಳು ಹೊಸ ರೂಪ ಪಡೆದುಕೊಂಡಿವೆ.

ಬೆಂಗಳೂರು ಪ್ರವೇಶಿಸುವ ರಾಜ್ಯದ ಸುಮಾರು 20 ಜಿಲ್ಲೆಗಳ ಪ್ರಯಾಣಿಕರಿಗೆ 8ನೇ ಮೈಲಿ ಜಂಕ್ಷನ್‌ ಹೆಬ್ಬಾಗಿಲು. ಅಷ್ಟೇ ಅಲ್ಲ, ಹೆಸರಘಟ್ಟ ರಸ್ತೆ ಮೂಲಕ ದೊಡ್ಡಬಳ್ಳಾಪುರ, ನೆಲಗೆದರನಹಳ್ಳಿ ಮೂಲಕ ಮಾಗಡಿ ರಸ್ತೆ ಸಂಪರ್ಕಿಸಲು ಈ ವೃತ್ತವನ್ನು ದಾಟಬೇಕು. ಈ ಜಂಕ್ಷನ್‌ನ ನಾಲ್ಕೈದು ಕಿ.ಮೀ ಸುತ್ತಲಿನ ಬಡಾವಣೆಗಳಲ್ಲಿ ಸಣ್ಣ ಮತ್ತು ಮಧ್ಯವರ್ಗದ ಕೈಗಾರಿಕೆಗಳಿವೆ. ಹೀಗಾಗಿ ದಿನದ 24 ಗಂಟೆಯೂ ಜನದಟ್ಟಣೆ, ವಾಹನದಟ್ಟಣೆ ನಿರಂತರವಾಗಿರುತ್ತದೆ. ವಾರಾಂತ್ಯ, ಹಬ್ಬದ ರಜೆ ದಿನಗಳಲ್ಲಂತೂ ಇಲ್ಲಿನ ಸಂಚಾರ ನಿಜಕ್ಕೂ ಸಂಕಟವೇ.

ADVERTISEMENT

ದಟ್ಟಣೆ ನಿರಂತರ : ವಾಹನ ಸಂಚಾರ ನಿಯಂತ್ರಣಕ್ಕಾಗಿ ವೃತ್ತದ ನಾಲ್ಕು ದಿಕ್ಕುಗಳಲ್ಲೂ ಮಾನವ ಚಾಲಿತ ಸಂಚಾರ ಸಿಗ್ನಲ್‌ಗಳಿವೆ. ಇದಕ್ಕೆ ಹೊಂದಿಕೊಂಡಂತಿರುವ ಸ್ಥಳಗಳಲ್ಲಿ ಬಸ್‌ಗಳನ್ನು ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಳ್ಳಲಾಗುತ್ತದೆ. ಇದರಿಂದಲೇ ವಾಹನ ದಟ್ಟಣೆ ಹೆಚ್ಚಾಗುತ್ತದೆ, ಪಾದಚಾರಿಗಳು ರಸ್ತೆ ದಾಟಲು ಹರಸಾಹಸಪಡಬೇಕು’ ಎಂದು ಸ್ಥಳೀಯರು ಹೇಳುತ್ತಾರೆ.

‘ರಸ್ತೆ ದಾಟುವಾಗ ಒಬ್ಬರೇ ಇದ್ದರೆ, ವಾಹನಗಳ ನಡುವೆ ನುಸುಳಿಕೊಂಡು ಹೋಗಬಹುದು. ಪುಟ್ಟ ಮಕ್ಕಳೋ, ಹಿರಿಯರು ಜೊತೆಯಲ್ಲಿದ್ದರೆ ಅಥವಾ ಕೈನಲ್ಲಿ ಲಗೇಜ್ ಇದ್ದರೆ, ಭಾರಿ ಸಾಹಸಪಡಬೇಕು. ಸಿಗ್ನಲ್ ನೋಡುತ್ತಾ ಭಯದಲ್ಲಿ ರಸ್ತೆ ದಾಟುವಾಗ ಹಲವರು ಉರುಳಿಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ’ ಎನ್ನುತ್ತಾರೆ ದಾಸರಹಳ್ಳಿಯ ನಿವಾಸಿ ರಮೇಶ್.

ನಾಲ್ಕು ದಿಕ್ಕುಗಳಲ್ಲೂ ಬಸ್‌ ನಿಲುಗಡೆಗೆ ವೃತ್ತದಿಂದ ಸ್ವಲ್ಪ ದೂರದಲ್ಲಿ ತಂಗುದಾಣಗಳಿವೆ. ಆದರೆ, ಕೆಲವು ಬಸ್‌ಗಳು ಮಾತ್ರ ಅಲ್ಲಿ ನಿಲ್ಲುತ್ತವೆ. ಬಹುತೇಕ ಪ್ರಯಾಣಿಕರು ಜಂಕ್ಷನ್ ಪಕ್ಕದಲ್ಲೇ ಕಾಯುವುದರಿಂದ, ಇಲ್ಲೇ ಬಸ್‌ಗಳನ್ನು ನಿಲ್ಲಿಸುತ್ತಾರೆ’ ಎಂದು ಸುತ್ತಲಿನ ಅಂಗಡಿಯವರು ಹೇಳುತ್ತಾರೆ.

‘8ನೇ ಮೈಲಿ ಸುತ್ತಮುತ್ತ ವಾಹನ ಸಂಚಾರ ಹೆಚ್ಚು. ಹಾಗಾಗಿ, ಈ ವೃತ್ತದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ರಸ್ತೆ ದಾಟಲು ಪರ್ಯಾಯ ಮಾರ್ಗವನ್ನು ರೂಪಿಸಬೇಕು. ಜಂಕ್ಷನ್‌ನ ನಾಲ್ಕು ಭಾಗದಲ್ಲಿರುವ ನಿಲ್ದಾಣಗಳನ್ನು ವಿಸ್ತರಿಸಬೇಕು. ಅಲ್ಲೇ ಪ್ರಯಾಣಿಕರನ್ನು ಇಳಿಸಿ ಹತ್ತಿಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಇದರಿಂದ ಸಂಚಾರ ದಟ್ಟಣೆ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ’ ಎಂಬುದು ಸ್ಥಳೀಯರ ಒತ್ತಾಯ.

ಎಂಟನೇ ಮೈಲಿ ಸರ್ಕಲ್‌ನಲ್ಲಿ ಜನ ರಸ್ತೆ ದಾಟುವುದಕ್ಕೆ ಕಷ್ಟಪಡುತ್ತಾರೆ. ರಸ್ತೆ ಆಗಲೀಕರಣ ಮಾಡಿದರೆ ಟ್ರಾಫಿಕ್‌ ಕಿರಿಕಿರಿ ಅಪಘಾತಗಳು ಕಡಿಮೆಯಾಗುತ್ತವೆ
ಶೇಖರ್, ಆಟೊ ಚಾಲಕ
ರಸ್ತೆಯ ಅಗಲೀಕರಣ ಮಾಡಿದರೆ ಸಂಚಾರ ದಟ್ಟಣೆಗೆ ಪರಿಹಾರ ಸಿಗಬಹುದು. ಕಟ್ಟಡದ ಮಾಲೀಕರ ಅನುಮತಿ ಪಡೆದು ಯೋಜನೆ ರೂಪಿಸಿದರೆ ಒಳ್ಳೆಯದು
ನೀಲೇಶ್, ಅಂಗಡಿ ಮಾಲೀಕ

‘ಸ್ವಯಂ ಚಾಲಿತ ಸಿಗ್ನಲ್ ಅಗತ್ಯ’

ವರ್ಷದ ಹಿಂದೆ ಸ್ಟ್ರಕ್ಚರ್ಡ್‌ ಇನ್ಫ್ರಾ ಟೀಂ ನಡೆಸಿದ ಅಧ್ಯಯನದ ಪ್ರಕಾರ ‘8ನೇ ಮೈಲಿನಲ್ಲಿ ಒಂದು ತಾಸಿನಲ್ಲಿ 11500 ವಾಹನಗಳು ಸುಗಮವಾಗಿ ಸಂಚರಿಸುವಂತಹ ವ್ಯವಸ್ಥೆ ಇದೆ. ಆದರೆ ಒಂದು ತಾಸಿನಲ್ಲಿ ಅದಕ್ಕಿಂತ ಕಡಿಮೆ ವಾಹನಗಳು ಸಚರಿಸುತ್ತಿದ್ದರೂ ದಟ್ಟಣೆ ಕಡಿಮೆಯಾಗಿಲ್ಲ. ಅದಕ್ಕೆ ಕಾರಣ ಅವೈಜ್ಞಾನಿಕ ಸಂಚಾರ ನಿರ್ವಹಣೆ’. ಇಲ್ಲಿ ಪೊಲೀಸರು ಸಿಗ್ನಲ್‌ಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇದು ಸ್ವಯಂ ಚಾಲಿತವಾಗಬೇಕು. ಆಯಾ ಪಥದಲ್ಲೇ ವಾಹನ ಚಲಿಸುವ ವ್ಯವಸ್ಥೆಯಾಗಬೇಕು’ ಎಂದು ಅಧ್ಯಯನದಲ್ಲಿ ಸಲಹೆ ನೀಡಲಾಗಿದೆ.

‘ಸರ್ವೀಸ್ ರಸ್ತೆ ವಿಸ್ತರಿಸಿ’

‘8ನೇ ಮೈಲಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣಕ್ಕೆ ಸ್ಥಳಾವಕಾಶವಿಲ್ಲ. ಗೊರಗುಂಟೆಪಾಳ್ಯದಿಂದ ಜಿಂದಾಲ್‌ವರೆಗೆ ಎರಡು ಬದಿಯಲ್ಲಿರುವ ಸರ್ವೀಸ್ ರಸ್ತೆಯನ್ನು ವಿಸ್ತರಿಸಿದರೆ ಈ ಭಾಗದಲ್ಲಿ ಸಂಚಾರ ಸುಗಮವಾಗುತ್ತದೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು’ ಎಂದು ಶಾಸಕ ಎಸ್. ಮುನಿರಾಜು ಒತ್ತಾಯಿಸಿದರು. ‘ಜಂಕ್ಷನ್‌ಗಳಲ್ಲಿ ಅವಕಾಶವಿರುವೆಡೆ ವಾಹನಗಳು ಸಂಚರಿಸಲು ‘ಎಡ/ಬಲ ತಿರುವಿಗೆ ಮುಕ್ತ ಅವಕಾಶ ಕಲ್ಪಿಸುವುದು ಕೂಡ ಸಂಚಾರ ಸಂಕಷ್ಟವನ್ನು ತಿಳಿಗೊಳಿಸಲು ಇರುವ ಮತ್ತೊಂದು ಪರಿಹಾರವಾಗಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.