ADVERTISEMENT

ರೈಲು ಪ್ರಯಾಣಿಕರ ನಗದು, ಚಿನ್ನಾಭರಣ ಕಳವು: ಏಳು ವರ್ಷ ಬಳಿಕ ಸೆರೆಸಿಕ್ಕ ಆರೋಪಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 0:24 IST
Last Updated 29 ಜೂನ್ 2025, 0:24 IST
ಜಿತೇಂದ್ರಕುಮಾರ ಚಾವ್ಲಾ
ಜಿತೇಂದ್ರಕುಮಾರ ಚಾವ್ಲಾ   

ಬೆಂಗಳೂರು: ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬಳಿಯಿದ್ದ  ನಗದು, ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು 7 ವರ್ಷದ ಬಳಿಕ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. 

ಉತ್ತರಾಖಂಡದ ಚಾವ್ಲಾ ಭವನ್ ನಿವಾಸಿ ಜಿತೇಂದ್ರ ಕುಮಾರ್ ಚಾವ್ಲಾ (37) ಬಂಧಿತ. ಈತನಿಂದ ₹22.75 ಲಕ್ಷ  ಮೌಲ್ಯದ 281 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.

ಈತನ ಬಂಧನದಿಂದ 4 ಕಳ್ಳತನ ಪ್ರಕರಣ ಪತ್ತೆಯಾಗಿದೆ. ಈತ ವಾಹನಗಳ ಡೀಲರ್ ಆಗಿದ್ದು, ರೈಲಿನಲ್ಲಿ ರಾತ್ರಿ ಪ್ರಯಾಣಿಕರನ್ನು ಗುರಿಯಾಗಿಸಿ ಚಿನ್ನ, ನಗದು ಲಪಟಾಯಿಸುತ್ತಿದ್ದ ಎಂದು ರೈಲ್ವೆ ಎಸ್‌ಪಿ ಸೌಮ್ಯಾ ಲತಾ ತಿಳಿಸಿದ್ದಾರೆ.

ADVERTISEMENT

ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (68) ಅವರು 2018ರ ಜೂನ್11ರಂದು ಸಂಜೆ ಎಕ್‌ಸ್‌‌ಪ್ರೆಸ್ ರೈಲಿನಲ್ಲಿ ಬಾಗಲಕೋಟೆಯಿಂದ ಅರಸೀಕೆರೆಗೆ ಪ್ರಯಾಣಿಸುತ್ತಿದ್ದರು. ರಾತ್ರಿ ಆಭರಣ, ನಗದು ಕಳುವಾಗಿತ್ತು. ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕನೂ ಇರಲಿಲ್ಲ.

250 ಗ್ರಾಂ ತೂಕದ ಗೌರಿಶಂಕರ ರುದ್ರಾಕ್ಷಿ ಪದಕ ಹೊಂದಿದ ಚಿನ್ನದ ಸರ, ಎರಡು ಚಿನ್ನದ ನಾಗರ ಉಂಗುರಗಳು, ₹1.62 ಲಕ್ಷ ನಗದು ಸೇರಿ ₹ 10.62 ಲಕ್ಷ ಮೌಲ್ಯದ ವಸ್ತುಗಳು ಕಳುವಾಗಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ಸ್ವಾಮೀಜಿ ದೂರು ನೀಡಿದ್ದರು. 

ಆರೋಪಿ ಪತ್ತೆಗಾಗಿ ಮೈಸೂರು ರೈಲ್ವೆ ಸಿಪಿಐ ಚೇತನ್, ಅರಸೀಕೆರೆ ಪಿಎಸ್‌ಐ ಮಹೇಶ್, ಎಎಸ್‌ಐ ಫುಯಾಜ್ ಖಾನ್ ಮತ್ತು ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಈ ತಂಡ ಹಲವು ಮಾಹಿತಿಗಳನ್ನು ಕಲೆ ಹಾಕಿ ಏಳು ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಿದೆ. 

ಆರೋಪಿ ಸಿಕ್ಕಿ ಬಿದ್ದಿದ್ದು: ಪ್ರೀತಮ್ ಕುಲಕರ್ಣಿ ಎಂಬುವವರ ತಂದೆ 2025ರ ಫೆಬ್ರುವರಿ 8ರಂದು ಉಡುಪಿಯಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ₹25 ಸಾವಿರ ಹಣ, ಚಿನ್ನಾಭರಣವಿದ್ದ 2 ಬ್ಯಾಗ್‌ಗಳು ಕಳ್ಳತನವಾಗಿತ್ತು.

ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಸಿಕ್ಕಿ ಬಿದ್ದ. 2018ರಲ್ಲಿ ಕೋಡಿಮಠದ ಸ್ವಾಮೀಜಿ ಅವರ ಆಭರಣ ಲಪಟಾಯಿಸಿದ್ದಾಗಿ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.