ADVERTISEMENT

ವರ್ಗಾವಣೆ ಸಮಸ್ಯೆ ತರಬೇಡಿ: ಪೊಲೀಸ್ ಕಮಿಷನರ್ ಸೀಮಂತ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 18:48 IST
Last Updated 11 ಜುಲೈ 2025, 18:48 IST
ನಗರದ ಸಿಎಆರ್ ಮೈದಾನದಲ್ಲಿ ನಡೆದ ಮಾಸಿಕ ಕವಾಯತಿನಲ್ಲಿ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಗೌರವ ವಂದನೆ ಸ್ವೀಕರಿಸಿದರು. 
ನಗರದ ಸಿಎಆರ್ ಮೈದಾನದಲ್ಲಿ ನಡೆದ ಮಾಸಿಕ ಕವಾಯತಿನಲ್ಲಿ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಗೌರವ ವಂದನೆ ಸ್ವೀಕರಿಸಿದರು.    

ಬೆಂಗಳೂರು: ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂತಹ ಕೆಲಸ ಮಾಡಬಾರದು ಹಾಗೂ ಇಲಾಖೆ ಕುರಿತು ನಕಾರಾತ್ಮಕವಾಗಿ ಮಾತನಾಡಬಾರದು ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ನಗರದ ಆಡುಗೋಡಿಯ ಸಿಎಆರ್ ಕವಾತು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಸಿಕ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಅಶಿಸ್ತು ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯಲ್ಲಿ ಕೆಲಸ ಮಾಡುವಾಗ ಇಲಾಖೆ ಬಗ್ಗೆಯೇ ಚಿಂತೆ ಮಾಡಬೇಕು. ಬೇರೆ ಇಲಾಖೆಗೆ ಸಂಬಂಧಿಸಿದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಿದರೆ, ಅಂತಹ ಪೊಲೀಸ್ ಸಿಬ್ಬಂದಿಗೆ ಕುತ್ತು ಎದುರಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಸಮಸ್ಯೆಗಳಿದ್ದರೆ ಹಿರಿಯ ಅಧಿಕಾರಿಗಳು ಹಾಗೂ ನನ್ನ ಗಮನಕ್ಕೆ ತರಬೇಕು. ವರ್ಗಾವಣೆ ಸಮಸ್ಯೆಯನ್ನು ಅಧಿಕಾರಿಗಳ ಮುಂದೆ ತರಬೇಡಿ. ಬೆಂಗಳೂರಿನಲ್ಲಿ ಅತ್ಯುತ್ತಮ ಮೂಲಸೌಕರ್ಯಗಳಿವೆ. ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾವಣೆಯಾದರೆ ಅಲ್ಲಿ ದಕ್ಷತೆಯಿಂದ ಕೆಲಸ ಮಾಡಿ ವೃತ್ತಿ ಅನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸಿಕೊಳ್ಳಬೇಕು. ಉತ್ತರ ಕರ್ನಾಟಕದಂತಹ ಊರುಗಳಿಂದ ಬಂದಿರುವ ಹಲವಾರು ಪೊಲೀಸರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿದ ನಂತರ ತರಬೇತಿ ಸಮಯದಲ್ಲಿ ನೀಡಲಾಗಿರುವ ಸಲಹೆಗಳನ್ನು ಪಾಲಿಸಿ’ ಎಂದು ತಿಳಿಸಿದರು.

ADVERTISEMENT

ಪೊಲೀಸರಿಗೆ ದಕ್ಷತೆ, ಪ್ರಾಮಾಣಿಕತೆ, ನಿಷ್ಠೆಯ ಗುಣಗಳೇ ಶೋಭೆ. ಸಮಗ್ರತೆ, ರಕ್ಷಣೆ, ಧೈರ್ಯ, ಸಂವೇದನೆ, ನ್ಯಾಯ- ನೀತಿಯ ಪ್ರತೀಕದಂತೆ ಅವರ ವ್ಯಕ್ತಿತ್ವವಿರಬೇಕು. ಖಾಕಿ ಧರಿಸಿದಾಗ ರೂಢಿಸಿಕೊಳ್ಳುವ ಶಿಸ್ತನ್ನು ನಿವೃತ್ತಿಯಾಗುವವರೆಗೂ ಕಾಪಾಡಿಕೊಳ್ಳಬೇಕು. ಜೊತೆಗೆ ಆರೋಗ್ಯದ ಕಡೆಗೂ ಗಮನಹರಿಸಬೇಕು  ಮತ್ತು ಕುಟುಂಬಕ್ಕೂ ಸಮಯ ನೀಡಬೇಕು ಎಂದು ಸಲಹೆ ನೀಡಿದರು. 

ಪೊಲೀಸ್ ಇಲಾಖೆಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ, ಮುಂದೆಯೂ ನೀಡಲಿದೆ. ಆಡುಗೋಡಿಯ ಮೈದಾನವನ್ನು ಕೆಎಸ್‌ಆರ್‌ಪಿ ಮೈದಾನದಂತೆ ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.

Cut-off box - ಸಿದ್ದಿಕ್ಕಿ ವಶಕ್ಕೆ ಪಡೆದು ವಿಚಾರಣೆ 2013ರಲ್ಲಿ ಬಿಜೆಪಿ ರಾಜ್ಯ ಕಚೇರಿ ಬಳಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಅಬೂಬಕ್ಕರ್ ಸಿದ್ದಿಕಿ ಅನ್ನು ಬಂಧಿಸಿರುವ ತಮಿಳುನಾಡು ಪೊಲೀಸರನ್ನು ರಾಜ್ಯ ಭಯೋತ್ಪಾದಕ ನಿಗ್ರಹ ದಳ (ಎಟಿಸಿ) ಅಧಿಕಾರಿಗಳು ಭೇಟಿಯಾಗಿ ಮಾಹಿತಿ ಕಲೆ ಹಾಕಿದ್ದಾರೆ‌. ತಮಿಳುನಾಡು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು ಅವರ ವಿಚಾರಣೆಯ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ತಮಿಳುನಾಡು‌ ಮೂಲದ ಅಲ್ ಉಮ್ಮಾ ಸಂಘಟನೆಯ ಸದಸ್ಯನಾಗಿ ಅಬೂಬಕ್ಕರ್ ಸಿದ್ದಿಕಿ ಗುರುತಿಸಿಕೊಂಡಿದ್ದ. 1998ರಲ್ಲಿ ಕೊಯಮತ್ತೂರು ಬಳಿ ಬಾಂಬ್ ಸ್ಫೋಟಿಸಿ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಹತ್ಯೆಗೆ ಯತ್ನಿಸಿದ್ದ ಬಳಿಕ ಅಲ್ ಉಮ್ಮಾ ಸಂಘಟನೆಯನ್ನು ನಿಷೇಧಿಸಲಾಗಿತ್ತು. 2013ರಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದ ಹಿಂದೆ ಅಬೂಬಕ್ಕರ್ ಸಿದ್ದಿಕಿಯ ಕೈವಾಡವಿರುವುದನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದರು‌. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿದ್ದ ಆರೋಪಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದು ಶೀಘ್ರದಲ್ಲೇ ವಶಕ್ಕೆ ಪಡೆಯಲು ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 2013ರ ಏಪ್ರಿಲ್ 17ರಂದು ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಘಟಕದ ಕಚೇರಿ ಬಳಿ ಹಳೆಯ ಬೈಕ್‌ನಲ್ಲಿ ಬಾಂಬ್ ಇರಿಸಿ ಸ್ಫೋಟಿಸಲಾಗಿತ್ತು‌. ಸ್ಫೋಟದಿಂದ ಪೊಲೀಸ್ ಸಿಬ್ಬಂದಿ  ಕಾಲೇಜು ವಿದ್ಯಾರ್ಥಿನಿ ಸಹಿತ 16 ಜನ ಗಾಯಗೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಅಬೂಬಕ್ಕರ್ ಸಿದ್ದಿಕಿ ತಲೆ ಮರೆಸಿಕೊಂಡಿರುವುದಾಗಿ ಆರೋಪಪಟ್ಟಿ ​ ಸಲ್ಲಿಸಿದ್ದರು‌‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.