
ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2025ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಐವರು ಅನುವಾದಕರು ಆಯ್ಕೆಯಾಗಿದ್ದಾರೆ.
ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅವರು ಪ್ರಶಸ್ತಿ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ. ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಅನುವಾದಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗಿದೆ.
ವಿವಿಧ ಇಂಗ್ಲಿಷ್ ಕೃತಿಗಳನ್ನು ಕನ್ನಡ ಮತ್ತು ಕೊಂಕಣಿ ಭಾಷೆಗೆ ಅನುವಾದಿಸಿರುವ ಹಾಸನದ ಜೆ.ವಿ. ಕಾರ್ಲೊ, ಕನ್ನಡದಿಂದ ಇಂಗ್ಲಿಷ್‌ಗೆ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದಿಸಿರುವ ಬೆಂಗಳೂರಿನ ವನಮಾಲಾ ವಿಶ್ವನಾಥ್, ಜಾನಪದ ಮತ್ತು ಅನುವಾದ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿದ ಚಿತ್ರದುರ್ಗದ ಸಂಧ್ಯಾ ರೆಡ್ಡಿ ಕೆ.ಆರ್., ಮರಾಠಿ ಹಾಗೂ ಮಲೆಯಾಳ ಭಾಷೆಯಿಂದ ಕನ್ನಡಕ್ಕೆ ಅನೇಕ ಮಹತ್ವದ ಕೃತಿಗಳನ್ನು ಅನುವಾದಿಸಿದ ಹೊಸಪೇಟೆಯ ವಿಠಲರಾವ್ ಟಿ. ಗಾಯಕ್ವಾಡ್ ಹಾಗೂ ಮರಾಠಿ ಭಾಷೆಯಲ್ಲಿ ರಚಿತವಾದ ಸಮಾಜ ಸುಧಾರಕರ ಮತ್ತು ಹೋರಾಟಗಾರರ ಕುರಿತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಅಥಣಿಯ ಜೆ.ಪಿ. ದೊಡಮನಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹50 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.
2024ನೇ ಸಾಲಿನ ಪುಸ್ತಕ ಬಹುಮಾನವೂ ಪ್ರಕಟಗೊಂಡಿದ್ದು, ಐದು ಅನುವಾದಿತ ಕೃತಿಗಳು ಆಯ್ಕೆಯಾಗಿವೆ. ಪುಸ್ತಕ ಬಹುಮಾನವು ತಲಾ ₹ 25 ಸಾವಿರ ನಗದು ಒಳಗೊಂಡಿದೆ.
2025ನೇ ಸಾಲಿನ ಪುಸ್ತಕ ಬಹುಮಾನ
ವಿಭಾಗ; ಅನುವಾದಿತ ಕೃತಿ; ಅನುವಾದಕ; ಮೂಲ ಲೇಖಕ
ಕನ್ನಡದಿಂದ ಇಂಗ್ಲಿಷ್; ಏಕತಾರಿ; ಆರ್.ಸದಾನಂದ; ಕುಪ್ಪೆ ನಾಗರಾಜ
ಇಂಗ್ಲಿಷ್‌ನಿಂದ ಕನ್ನಡ; ಆ ಲಯ ಈ ಲಯ; ನಟರಾಜ ಹೊನ್ನವಳ್ಳಿ; ಲೂಯಿ ನಕೋಸಿ
ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡ; ಬೌಮನಿಜಂ–ಆಧುನಿಕತೆಯಿಂದ ದ್ರವಾಧು ನಿಕತೆಯವರೆಗೆ; ಮಲ್ಲೇಶಪ್ಪ ಸಿದಾಂಪುರ; ಬಿ.ತಿರುಪತಿರಾವು
ಹಿಂದಿಯಿಂದ ಕನ್ನಡ; ಸತ್ತವರ ಸೊಲ್ಲು; ಕಾರ್ತಿಕ್ ಆರ್.; ಅಶುತೋಷ್ ಭಾರದ್ವಾಜ್
ಕನ್ನಡದಿಂದ ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾರತೀಯ ಭಾಷೆ; ಹಾಥಿ ಪಾಲ್ನೆ ಜೊ ಚಲಿ; ಎನ್. ದೇವರಾಜ್; ಸಹನ ಕಾಂತಬೈಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.