ಬೆಂಗಳೂರು: ಲೈಂಗಿಕ ಕಾರ್ಮಿಕರನ್ನು ಇತರೆ ಎಲ್ಲ ಪ್ರಜೆಗಳಂತೆ ಘನತೆ ಮತ್ತು ಗೌರವದಿಂದ ನೋಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾಧನ ಮಹಿಳಾ ಸಂಘ ಆಗ್ರಹಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯೆ ಗೀತಾ ಎಂ., ‘ಲೈಂಗಿಕ ಕಾರ್ಮಿಕರ ಘನತೆಯ ಹಕ್ಕು, ಪೊಲೀಸ್ ಹಿಂಸಾಚಾರದ ವಿರುದ್ಧ ಅವರ ಹಕ್ಕು ಮತ್ತು ಇತರೆ ಪ್ರಮುಖ ಸಾಂವಿಧಾನಿಕ ಖಾತರಿಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ವೇಶ್ಯಾವಾಟಿಕೆಯೂ ಒಂದು ವೃತ್ತಿ ಮತ್ತು ಲೈಂಗಿಕ ಕಾರ್ಯಕರ್ತೆಯರು ಕೂಡ ಕಾನೂನಿನ ಅಡಿಯಲ್ಲಿ ಘನತೆಯಿಂದ ಬದುಕಲು ಹಾಗೂ ಸಮಾನ ರಕ್ಷಣೆಯನ್ನು ಪಡೆಯಲು ಅರ್ಹರು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ರಾಜ್ಯ ಸರ್ಕಾರಗಳು ಕಾರ್ಯರೂಪಕ್ಕೆ ತರಬೇಕು’ ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಹುಲಿಗೆಮ್ಮ, ‘ಐಟಿಪಿಎ ಕಾಯ್ದೆಯು ಸ್ವ–ಇಚ್ಛೆಯಿಂದ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಹಕರನ್ನು ಆಯ್ದುಕೊಳ್ಳುವಂತಿಲ್ಲ. 18 ವರ್ಷ ಮೇಲ್ಪಟ್ಟವರು ಲೈಂಗಿಕ ಕಾರ್ಮಿಕರ ಮೇಲೆ ಅವಲಂಬಿತರಾಗಬಾರದೆಂದು ಐಟಿಪಿಎ ಕಾಯ್ದೆ ಹೇಳುತ್ತದೆ. ಆದ್ದರಿಂದ ಈ ಕಾಯ್ದೆಯನ್ನು ಪರಾಮರ್ಶಿಸುವ ಅಗತ್ಯವಿದೆ’ ಎಂದರು.
‘ಸರ್ಕಾರ ಲೈಂಗಿಕ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಯೋಜನೆ ರೂಪಿಸಬೇಕು. ಲೈಂಗಿಕ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಸಿಗುವಂತೆ ಏಕಗವಾಕ್ಷಿ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಸರ್ವರಿಗೂ ಸೂರು ಅಭಿಯಾನದಡಿ ಲೈಂಗಿಕ ಕಾರ್ಮಿಕರಿಗೂ ಮನೆಗಳನ್ನು ಒದಗಿಸಬೇಕು. ಎಚ್‌ಐವಿ ಬಾಧಿತ ಲೈಂಗಿಕ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಔಷಧಿಗಳು ಸೇರಿದಂತೆ ಪೌಷ್ಟಿಕ ಆಹಾರವನ್ನು ನೀಡಬೇಕು. ದಾಖಲಾತಿ ಕೇಳದೇ ಲೈಂಗಿಕ ಕಾರ್ಮಿಕರ ಮಕ್ಕಳನ್ನು ಶಾಲೆಗಳಿಗೆ ಸೇರಿಸಿಕೊಳ್ಳಬೇಕು. ಕೇಂದ್ರೀಯ ಶಾಲೆಗಳಲ್ಲೂ ನಮ್ಮ ಮಕ್ಕಳಿಗೆ ಮೀಸಲಾತಿಯನ್ನು ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.