
ಬೆಂಗಳೂರು: ‘ಸಂಸ್ಕರಿಸಿದ ನೀರಿನ ಗುಣಮಟ್ಟದ ಖಾತ್ರಿಗಾಗಿ ರಾಷ್ಟ್ರಮಟ್ಟದಲ್ಲಿ ಏಕ ರೂಪದ ನೀತಿ ರೂಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ’ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ತಿಳಿಸಿದರು.
ನೀತಿ ಆಯೋಗವು ಬೆಂಗಳೂರು ಜಲ ಮಂಡಳಿಯ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿರುವ ʻಭಾರತದಲ್ಲಿ ಸಂಸ್ಕರಿಸಿದ ನೀರಿನ ಪುನರ್ ಬಳಕೆʼ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ನಗರೀಕರಣದ ಪ್ರಭಾವದಿಂದಾಗಿ ನೀರಿನ ಬಳಕೆ ಪ್ರಮಾಣ ಹೆಚ್ಚಳವಾಗಿದೆ. ಆದರೆ, ಭಾರತದಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ಅಂತರ್ಜಲ ಹಾಗೂ ನದಿ ನೀರಿನ ಅವಲಂಬನೆ ಜತೆಗೆ ಬಳಸಿದ ನೀರಿನ ಸಂಸ್ಕರಣೆಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ ಕರ್ನಾಟಕವೂ ಸೇರಿ 11 ರಾಜ್ಯಗಳಲ್ಲಿ ಸಂಸ್ಕರಿಸಿದ ನೀರಿನ ಪುನರ್‌ಬಳಕೆ ನೀತಿ ಇದೆ. 2030ರೊಳಗೆ ಶೇ 50, 2045ರ ಹೊತ್ತಿಗೆ ಶೇ 100ರಷ್ಟು ನೀರಿನ ಪುನರ್‌ಬಳಕೆಯನ್ನು ಮಾಡುವತ್ತ ದೇಶ ಹೆಜ್ಜೆ ಇಡಲೇಬೇಕಾಗಿರುವುದರಿಂದ ಏಕರೂಪದ ನೀತಿ ಜಾರಿಗೆ ಪ್ರಯತ್ನ ನಡೆದಿದೆ’ ಎಂದು ವಿವರಿಸಿದರು.
‘ಭಾರತದ ನಗರ ಪ್ರದೇಶಗಳಲ್ಲಿ ಪ್ರತಿ ನಿತ್ಯ 72,368 ಮಿಲಿಯನ್ ಲೀಟರ್ (ಎಂಎಲ್‌ಡಿ) ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಇದರಲ್ಲಿ 31,885 ಎಂಎಲ್‌ಡಿ ಸಂಸ್ಕರಣೆಯಾಗುತ್ತಿದೆ. ಶೇ 60ರಷ್ಟು ಇನ್ನೂ ಸಂಸ್ಕರಣೆಯಾಗಬೇಕಿದೆ. ಬೆಂಗಳೂರಿನಲ್ಲಿ ನಿತ್ಯ 2,200 ಎಂಎಲ್‌ಡಿ ಕೊಳಚೆ ನೀರು ಸಂಗ್ರಹವಾಗುತ್ತಿದ್ದು 1,300 ಎಂಎಲ್‌ಡಿ ಸಂಸ್ಕರಣೆಯಾಗುತ್ತಿದೆ. ಈ ಕಾರ್ಯ ಶ್ಲಾಘನೀಯ’ ಎಂದರು.
ಕೇಂದ್ರ ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಿ.ತಾರಾ ಮಾತನಾಡಿ, ‘ಸಂಸ್ಕರಿಸಿದ ನೀರಿನ ಬಳಕೆಯನ್ನು ಆರ್ಥಿಕ ಲೆಕ್ಕಾಚಾರದ ನೆಲೆಯಲ್ಲೂ ನೋಡುವುದು ಅಗತ್ಯವಿದೆ. ಬೆಂಗಳೂರು ಜಲಮಂಡಳಿ ವಾರ್ಷಿಕ ಸದ್ಯ ₹190 ಕೋಟಿ ಆದಾಯ ಹೊಂದಿದೆ. ಮೀಟರಿಂಗ್ ಮತ್ತು ವ್ಯವಸ್ಥಿತ ಮರುಬಳಕೆಯಿಂದ ₹1,000 ಕೋಟಿಗೆ ಏರಿಸಲು ಅವಕಾಶವಿದೆ. ನೀರಿನ ಲೆಕ್ಕಪತ್ರ ಮತ್ತು ಪುನರ್‌ಬಳಕೆ ನಿರ್ವಹಣೆಗೆ ವೃತ್ತಿಪರ ವಿಭಾಗ ಸ್ಥಾಪಿಸಿ, ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ನೀರಿನ ಬಳಕೆ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿ, ‘ಬೆಂಗಳೂರಿನಲ್ಲಿ 34 ಒಳಚರಂಡಿ ನೀರು ಸಂಸ್ಕರಿಸುವ ಘಟಕಗಳಿದ್ದು (ಎಸ್‌ಟಿಪಿ), ಇನ್ನೂ 12 ಘಟಕ ನಿರ್ಮಾಣ ಮಾಡಿ ನೀರಿನ ಸಂಸ್ಕರಣೆ ಪ್ರಮಾಣ ಹೆಚ್ಚಿಸಲಾಗುತ್ತಿದೆ’ ಎಂದು ತಿಳಿಸಿದರು.
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್ ಕಾರ್ಯಾಗಾರದ ಮಾಹಿತಿ ನೀಡಿದರು.
‘ಕರ್ನಾಟಕದಲ್ಲಿ ಸಂಸ್ಕರಣೆ ಬಳಕೆಗೆ ಒತ್ತು
‘ಬೆಂಗಳೂರು ನಗರದಲ್ಲಿ ಕಳೆದ ವರ್ಷ ಕುಡಿಯುವ ನೀರಿನ ಪರಿಸ್ಥಿತಿ ಸುಧಾರಿಸಲು ಸಂಸ್ಕರಿಸಿದ ನೀರನ್ನು ಕುಡಿಯುವುದಕ್ಕೆ ಹೊರತಾಗಿ ಇತರೆ ಕಾರ್ಯಗಳಿಗೆ ಬಳಸಲು ಸೂಚಿಸಲಾಗಿತ್ತು. ಇದಕ್ಕಾಗಿ ನಗರದ 110 ಕೆರೆಗಳ ಪುನರುಜ್ಜೀವನಗೊಳಿಸಲಾಯಿತು’ ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದರು. ‘ಸಂಸ್ಕರಿಸಿದ ನೀರಿನ ಪುನರ್‌ಬಳಕೆ ಸಂಬಂಧಿತ ನಿಯಮಗಳನ್ನು ಕರ್ನಾಟಕ ಜಾರಿಗೆ ತಂದಿದ್ದು ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. 2028ರೊಳಗೆ ಶೇ 100ರಷ್ಟು ಸಂಸ್ಕರಿಸಿದ ನೀರಿನ ಬಳಕೆ ಮತ್ತು ಮಳೆನೀರು ಸಂಗ್ರಹಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.