ADVERTISEMENT

ವಾಣಿಜ್ಯ ಸಂಕೀರ್ಣಕ್ಕಾಗಿ ಮರಗಳಿಗೆ ಕೊಡಲಿ ?

ಹಸಿರು ಉಳಿಸಲು ಸ್ಥಳೀಯರ ಒತ್ತಾಯ: ಖಾಸಗಿ ಸಹಭಾಗಿತ್ವದಲ್ಲಿ ಸಂಕೀರ್ಣ ನಿರ್ಮಾಣ: ₹38.89 ಕೋಟಿ ವರಮಾನ ನಿರೀಕ್ಷೆ

ಪೀರ್‌ ಪಾಶ, ಬೆಂಗಳೂರು
Published 24 ಜುಲೈ 2018, 5:10 IST
Last Updated 24 ಜುಲೈ 2018, 5:10 IST
ಬಿಡಿಎ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಬೆಳೆದು ಹಸಿರಿನ ಹಂದರ ನಿರ್ಮಿಸಿರುವ ಮರಗಳು – ಪ್ರಜಾವಾಣಿ ಚಿತ್ರ
ಬಿಡಿಎ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಬೆಳೆದು ಹಸಿರಿನ ಹಂದರ ನಿರ್ಮಿಸಿರುವ ಮರಗಳು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್‌ ಆವರಣ ಪ್ರವೇಶಿಸಿದರೆ ಪುಟ್ಟದೊಂದು ಉದ್ಯಾನ ಪ್ರವೇಶಿಸಿದಂತಾಗುತ್ತದೆ. ಇನ್ನು ಸ್ವಲ್ಪ ದಿನಗಳಲ್ಲಿ ಈ ಚಿತ್ರ ಬದಲಾಗಿದೆ. ಹಸಿರುಸಿರಿಯ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ತಲೆಯೆತ್ತಲಿದೆ. ಪಕ್ಷಿಗಳ ಕಲರವದ ಬದಲು ಜನರ ಗದ್ದಲ ತುಂಬಿಕೊಳ್ಳಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಈ ಆವರಣದಲ್ಲಿನ 30 ವರ್ಷ ಹಳೆಯ ಸಂಕೀರ್ಣದ ಕಟ್ಟಡಗಳನ್ನು ನೆಲಸಮಗೊಳಿಸಿ, ಹೊಸದೊಂದು ವಾಣಿಜ್ಯ ಸಂಕೀರ್ಣವನ್ನು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಿಸಲು ಯೋಜನೆ ರೂಪಿಸಿದೆ. ಹಾಗಾಗಿ, ಹುಲುಸಾಗಿ ಬೆಳೆದು ಜನರಿಗೆ ಶುದ್ಧಗಾಳಿ ಹಾಗೂ ನೆರಳನ್ನು ನೀಡುತ್ತ, ಪಕ್ಷಿಗಳಿಗೆ ಆವಾಸ ಸ್ಥಾನವಾಗಿರುವ 171 ಮರಗಳ ಜೀವಕ್ಕೆ ಕುತ್ತು ಒದಗಿದೆ. ಕೆಲವೇ ದಿನಗಳಲ್ಲಿ ಈ ಮರಗಳು ಧರೆಗೆ ಉರುಳಲಿವೆ.

ತರಹೇವಾರಿ ಮರಗಳು:ಆವರಣದಲ್ಲಿ ಅರಳಿ, ಆಲ, ಹೊಂಗೆ, ಟೂಲಿಫ್‌ ಟ್ರೀ (ನೀರುಗಾಯಿ ಮರ), ರೈನ್‌ ಟ್ರೀ, ಸಿಲ್ವರ್‌ ಓಕ್‌, ಬಸವನಪಾದ, ಪಾಂಪ್ಸ್‌ ಜಾತಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳಲ್ಲದೆ ತಬೂಬಿಯಾ, ಚೆರ್ರಿ,ಅತ್ತಿ, ಸಂಪಿಗೆ, ನೇರಳೆ,ಮಾವು, ತೆಂಗು, ನಿಂಬೆ, ನೆಲ್ಲಿಕಾಯಿ,ಹಲಸು, ಬಾರೆ, ಸೀಬೆ, ಅಶೋಕ, ಸುಬಾಬಲ, ಕಾಡುಹುಣಸೆ, ಸೀತಾಫಲ ಗಿಡ–ಮರಗಳು ಇಲ್ಲಿ ಬೆಳೆದು ನಿಂತಿವೆ. ಈ ಮರಗಳ ಹನನದಿಂದ ಪ್ರದೇಶದಹಸಿರು ಹೇಳ ಹೆಸರಿಲ್ಲದಂತೆ ಮರೆಯಾಗಲಿದೆ ಎಂದು ಕೆಲವು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

‘ಹಳೆಯ ಕಾಂಪ್ಲೆಕ್ಸ್‌ನಿಂದ ವರಮಾನ ಬರುತ್ತಿಲ್ಲವೆಂದು ಅದನ್ನು ಕೆಡವಲು ಬಿಡಿಎ ಮುಂದಾಗಿದೆ. ಸರ್ಕಾರದ ಯೋಜನೆಗಳ ಉದ್ದೇಶ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇರಬೇಕೇ ಹೊರತು, ಹಣ ಗಳಿಕೆಗಾಗಿ ಪರಿಸರವನ್ನು ಹಾಳು ಮಾಡುವಂತೆ ಇರಬಾರದು’ ಎನ್ನುತ್ತಾರೆ ‘ಐ ಚೇಂಜ್‌ ಇಂದಿರಾನಗರ’ ಸಮೂಹದ ಸದಸ್ಯ ರಾಜೇಶ್‌ ಡಾಂಗಿ.

ಆದೇಶದ ಉಲ್ಲಂಘನೆ?:‘ಕಾಂಪ್ಲೆಕ್ಸ್‌ನ ಉತ್ತರದಲ್ಲಿ 75 ಮೀಟರ್‌ ಅಂತರದಲ್ಲಿಯೇ ಬಿನ್ನಮಂಗಲ (ಕದಿರೆನಪಾಳ್ಯ) ಕೆರೆ, 25 ಮೀ ಅಂತರದಲ್ಲಿ ರಾಜಕಾಲುವೆ ಹರಿಯುತ್ತದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದ ಪ್ರಕಾರ ಕೆರೆ ಮತ್ತು ರಾಜಕಾಲುವೆಯ ಬಫರ್‌ ಝೋನ್‌ಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವಂತಿಲ್ಲ. ಹೊಸ ಕಾಂಪ್ಲೆಕ್ಸ್‌ ನಿರ್ಮಾಣ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತೆ ಆಗುತ್ತದೆಯಲ್ಲವೆ’ ಎಂಬ ಪ್ರಶ್ನೆಯೂ ರಾಜೇಶ್‌ ಅವರನ್ನು ಕಾಡುತ್ತಿದೆ.

‘ಕಾಂಪ್ಲೆಕ್ಸ್‌ ಅಂಚಿನಲ್ಲಿರುವ ಮರಗಳನ್ನಾದರೂ ಕಡಿಯದೇ ಬಿಡಬೇಕು. ಇಂದಿನ ತಂತ್ರಜ್ಞಾನ ಬಳಸಿ, ದೀರ್ಘಕಾಲ ಬಾಳುವ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು’ ಎನ್ನುವುದು ಇಂದಿರಾನಗರ ವಾಸಿ ಅರವಿಂದ್‌ ಒತ್ತಾಯ.

‘ಪ್ರತಿದಿನ ಬೆಳಿಗ್ಗೆ ವಾಕ್‌ ಮಾಡಲು, ಬ್ಯಾಡ್ಮಿಂಟನ್‌ ಆಡಲು ಈ ಆವರಣ ಪ್ರಸಕ್ತವಾಗಿತ್ತು. ಕೆಲವು ದಿನಗಳಲ್ಲಿಈ ವಾತಾವರಣ ಇರುವುದಿಲ್ಲ ಎನ್ನುವುದೇ ದುಃಖದ ಸಂಗತಿ’ ಎಂದು ಸ್ಥಳೀಯರಾದ ಸ್ಯಾಮುವೆಲ್‌ ವಿಷಾದಿಸಿದರು.

‘ಇಲ್ಲಿನ ಮರಗಳು ನೂರಾರು ಅಳಿಲು, ಗಿಳಿ, ಬಾರ್ಬೆಟ್‌ ಹಕ್ಕಿಗಳಿಗೆ ಆವಾಸ ಸ್ಥಾನವಾಗಿವೆ. ಹೊಸ ಕಾಮಗಾರಿಯಿಂದ ಅವುಗಳ ಜೀವನಕ್ಕೂ ಕಂಟಕ ಒದಗಿ ಬಂದಿದೆ’ ಎಂದವರು ಬೇಸರ ವ್ಯಕ್ತಪಡಿಸಿದರು.

₹ 38.89 ಕೋಟಿ ವರಮಾನ: ಹೊಸ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಅಂದಾಜು ₹ 700 ಕೋಟಿ ಅನುದಾನ ಬೇಕು. ಅದನ್ನು ಭರಿಸುವ ಆರ್ಥಿಕಶಕ್ತಿ ಬಿಡಿಎಗೆ ಇಲ್ಲ ಎಂಬ ಕಾರಣಕ್ಕಾಗಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.ಮೇವರಿಕ್ ಹೋಲ್ಡಿಂಗ್ಸ್ ಆ್ಯಂಡ್ ಇನ್‌ವೆಸ್ಟ್‌ಮೆಂಟ್ಸ್‌ ಕಂಪನಿ ಹಾಗೂ ಎಂಬಸಿ ಗ್ರೂಪ್ ಕಂಪನಿಗಳು ಸಂಕೀರ್ಣ ನಿರ್ಮಾಣದ ಗುತ್ತಿಗೆ ಪಡೆದಿವೆ. ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷ ಗಡುವು ನೀಡಲಾಗಿದೆ.

ಕಾಮಗಾರಿ ನಡೆಸುವ ಕಂಪನಿಗಳು 30 ವರ್ಷಗಳ ಕಾಲ ಸಂಕೀರ್ಣವನ್ನು ನಿರ್ವಹಣೆ ಮಾಡುತ್ತ, ಒಪ್ಪಂದದ ಪ್ರಕಾರ ನೆಲಬಾಡಿಗೆ ಕಟ್ಟಲಿವೆ. ಇದರಿಂದ ವಾರ್ಷಿಕವಾಗಿ ₹ 38.89 ಕೋಟಿ ವರಮಾನ ಬರಲಿದೆ ಎಂದುಬಿಡಿಎ ಪ್ರಕಟಣೆ ತಿಳಿಸಿದೆ.

ಆವರಣದಲ್ಲಿನ ಮರಗಳು ಸೊಂಪಾದ ನೆರಳು ನೀಡುತ್ತಿವೆ. –ಪ್ರಜಾವಾಣಿ ಚಿತ್ರ

***

ಸಣ್ಣ–ಪುಟ್ಟ ಗಿಡಗಳನ್ನು ತೆರವುಗೊಳಿಸುತ್ತೇವೆ. ಕೆಲವು ಮರಗಳನ್ನು ಉಳಿಸಿಕೊಂಡು, ಹೊಸ ಸಂಕೀರ್ಣದ ಸುತ್ತ ಲ್ಯಾಂಡ್‌ಸ್ಕೇಪ್‌ ಅನ್ನು ಮತ್ತೆ ರೂಪಿಸುತ್ತೇವೆ
-ಮಂಜುನಾಥ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಬಿಡಿಎ

***

ಅಂಕಿ–ಅಂಶ

₹ 657 ಕೋಟಿ -ಹೊಸ ವಾಣಿಜ್ಯ ಸಂಕೀರ್ಣ ನಿರ್ಮಾಣದ ಅಂದಾಜು ವೆಚ್ಚ

6.03 ಎಕರೆ -ಬಿಡಿಎ ಆವರಣದ ಪ್ರದೇಶ

14.95 ಲಕ್ಷ ಚದರ ಅಡಿ -ಹೊಸ ಸಂಕೀರ್ಣದಲ್ಲಿ ಲಭ್ಯವಾಗುವ ಸ್ಥಳಾವಕಾಶ

***

ಹಳೆ ಸಂಕೀರ್ಣ ಕೆಡವಲು ಕಾರಣ?

-ನೆಲ ಪ್ರದೇಶ ಪ್ರಮಾಣ(ಎಫ್‌ಎಆರ್–ಫ್ಲೋರ್ ಏರಿಯಾ ರೇಷಿಯೋ) ಕಡಿಮೆ ಇದೆ.

-ಕಟ್ಟಡಗಳು ಹಳೆಯದಾಗಿವೆ.

-ವಾರ್ಷಿಕವಾಗಿ ಬರುವ ₹ 5 ಕೋಟಿ ವರಮಾನಕ್ಕಿಂತ ಸಂಕೀರ್ಣ ನಿರ್ವಹಣಾ ವೆಚ್ಚವೇ ಹೆಚ್ಚಾಗಿದೆ.

-ವಾಹನ ನಿಲುಗಡೆ ಮತ್ತು ಲಿಫ್ಟ್‌ ವ್ಯವಸ್ಥೆ ಇಲ್ಲ ಎಂದು ಬಿಡಿಎ ಕಾರಣಗಳನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.