ADVERTISEMENT

ಬೆಂಗಳೂರಿನಲ್ಲಿ 30 ಸಾವಿರ ಮರಗಳಿಗೆ ಕುತ್ತು?

ಪಿಆರ್‌ಆರ್‌ ಯೋಜನೆಗೆ 16,685 ಮರ ತೆರವು?

ಪ್ರವೀಣ ಕುಮಾರ್ ಪಿ.ವಿ.
Published 21 ಫೆಬ್ರುವರಿ 2020, 4:10 IST
Last Updated 21 ಫೆಬ್ರುವರಿ 2020, 4:10 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನ ಹಂತದಲ್ಲಿರುವ ಹಾಗೂ ಶೀಘ್ರವೇ ಅನುಷ್ಠಾನಗೊಳ್ಳಲಿರುವ ಮೂಲಸೌಕರ್ಯ ಕಾಮಗಾರಿಗಳಿಗಾಗಿ ನಗರವು ಒಟ್ಟು 29,512 ಮರಗಳನ್ನು ಕಳೆದುಕೊಳ್ಳಲಿದೆ. ಈ ಪೈಕಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆಯೊಂದಕ್ಕೆ 16,685 ಮರಗಳನ್ನು ತೆರವುಗೊಳಿಸಬೇಕಾಗುತ್ತದೆ.

ಪಿಆರ್‌ಆರ್‌ ಯೋಜನೆಗೆ ರಾಜ್ಯ ಪರಿಸರದ ಮೇಲಿನ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದಿಂದ (ಎಸ್‌ಇಐಎಎ) ಅನುಮೋದನೆ ಪಡೆಯುವ ಸಲುವಾಗಿ ಬಿಡಿಎ ಅಧಿಕಾರಿಗಳು ಎಸ್‌ಇಐಎಎಗೆ ಸಲ್ಲಿಸಿರುವ ದಾಖಲೆಗಳಲ್ಲಿ ಈ ಯೋಜನೆಗೆ ಒಟ್ಟು ಎಷ್ಟು ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ಮಾಹಿತಿ ಇದೆ. ಈ ದಾಖಲೆಯ ಪ್ರತಿ ‘ಪ್ರಜಾವಾಣಿ’ಗೆ ದೊರಕಿದೆ.

‘ಪಿಆರ್‌ಆರ್ ಯೋಜನೆ ಜಾರಿ ವೇಳೆಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿದ ಬಳಿಕವೇ ಮರಗಳನ್ನು ತೆರವುಗೊಳಿಸುವ ಅಥವಾ ಸ್ಥಳಾಂತರಿಸುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಪಿಆರ್‌ಆರ್‌ ಹೊರತಾಗಿ ಭಾರಿ ಪ್ರಮಾಣದಲ್ಲಿ ಹಸಿರು ಕವಚಕ್ಕೆ ಧಕ್ಕೆ ತರುತ್ತಿರುವುದು ನಗರದ ಹೊರವಲಯಗಳಲ್ಲಿ 12 ರಸ್ತೆ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್‌ಡಿಸಿಎಲ್‌) ಜಾರಿಗೊಳಿಸುತ್ತಿರುವ ಈ ಯೋಜನೆ ಹೆಚ್ಚೂ ಕಡಿಮೆ 8 ಸಾವಿರ ಮರಗಳನ್ನು ಬಲಿ ಪಡೆಯಲಿದೆ. ಈ ಯೋಜನೆ ಸಲುವಾಗಿ ಮರಗಳನ್ನು ಈಗಾಗಲೇ ಕಡಿಯಲಾಗುತ್ತಿದೆ.

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲೂ ಅಧಿಕೃತವಾಗಿ 1,253 ಮರಗಳನ್ನು ತೆರವುಗೊಳಿಸಲಾಗುತ್ತಿದೆ (ಇದರಲ್ಲಿ ಸಿಲ್ಕ್‌ಬೋರ್ಡ್‌– ಕೆ.ಆರ್‌.ಪುರ ಹಾಗೂ ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗಗಳಲ್ಲಿ ಕಡಿಯುವ ಮರಗಳ ಸಂಖ್ಯೆ ಸೇರಿಲ್ಲ). ನಮ್ಮ ಮೆಟ್ರೊ ಮೊದಲ ಹಂತದ ಕಾಮಗಾರಿ ಸಲುವಾಗಿ ಈಗಾಗಲೇ ನಗರವು 1,422 ಮರಗಳನ್ನು ಕಳೆದುಕೊಂಡಿದೆ.

ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನು ಜಾರಿಗೂ ಈಗಿನ ಸರ್ಕಾರ ಉತ್ಸಾಹ ತೋರುತ್ತಿದೆ. ಈ ಯೋಜನೆಗೆ ನಗರವು ಕೇಂದ್ರ ಪ್ರದೇಶಗಳಲ್ಲಿರುವ 3,716 ಮರಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

‘ಈಗಲೇ ಗಿಡ ಬೆಳೆಸಿ’
‘ಪಿಆರ್‌ಆರ್‌ ಯೋಜನೆಗೆ ಮರ ಕಡಿದ ಬಳಿಕ ಗಿಡಗಳನ್ನು ನೆಡುವ ಬದಲು ಬಿಡಿಎ ಈಗಲೇ ಗಿಡಗಳನ್ನು ನೆಟ್ಟು ಬೆಳೆಸಬೇಕು. ಈ ಯೋಜನೆ ಸಲುವಾಗಿ ಕಡಿಯುವ ಒಂದೊಂದು ಮರಗಳಿಗೆ ಪ್ರತಿಯಾಗಿ ಹತ್ತು ಪಟ್ಟು ಹೆಚ್ಚು ಗಿಡಗಳನ್ನು ಬೆಳೆಸಬೇಕು’ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಸೂರ್ಯಕಿರಣ್‌ ಸಲಹೆ ನೀಡಿದರು.

‘ನಮ್ಮಲ್ಲಿ ಮರ ಕಡಿದು ಯೋಜನೆ ಜಾರಿಗೊಳಿಸಿದ ಬಳಿಕ ಗಿಡಗಳನ್ನು ನೆಟ್ಟು ಬೆಳೆಸುವ ಹೊಣೆಯನ್ನು ಯಾವುದೇ ಇಲಾಖೆಗಳೂ ಸರಿಯಾಗಿ ಜಾರಿಗೊಳಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯೋಜನೆ ಮರುಪರಿಶೀಲಿಸಿ’
‘ಪರಿಸರದ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಗಳನ್ನು ಪುನರ್‌ ಪರಿಶೀಲಿಸಬೇಕು. ಎಸ್‌ಟಿಆರ್‌ಆರ್‌ ಹಾಗೂ ಪಿಆರ್‌ಆರ್‌ ನಿರ್ಮಾಣವಾಗುವುದರಿಂದ 12 ರಸ್ತೆಗಳ ವಿಸ್ತರಣೆ ಯೋಜನೆ ಕೈಬಿಡಬಹುದು. ಪ್ರತಿಯೊಂದು ಮರವನ್ನೂ ಉಳಿಸಿಕೊಳ್ಳಲು ಸರ್ಕಾರ ಗಂಭೀರ ಪ‍್ರಯತ್ನ ಮಾಡಬೇಕು’ ಎಂದು ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್‌ನ ಟ್ರಸ್ಟಿ ಡಿ.ಟಿ.ದೇವರೆ ಸಲಹೆ ನೀಡಿದರು.

‘ಎಸ್‌ಟಿಆರ್‌ಆರ್‌: 17,661 ಮರಗಳಿಗೆ ಕೊಡಲಿ’
ನಗರದ ಹೊರವಲಯದಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಉಪನಗರ ವರ್ತುಲ ರಸ್ತೆ ಯೋಜನೆಗೆ (ಎಸ್‌ಟಿಆರ್‌ಆರ್‌) ಒಟ್ಟು 17,661 ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ನಗರದ ಹವಾಮಾನದ ಮೇಲೆ ಇದು ಕೂಡ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುತ್ತಾರೆ ಪರಿಸರ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.