ADVERTISEMENT

ಮರದ ಬುಡಕ್ಕೆ ರಂಧ್ರ ಕೊರೆದು ಆ್ಯಸಿಡ್‌ ಸುರಿದರು

ರಾಜರಾಜೇಶ್ವರಿನಗರ: ಸಾಯುವ ಸ್ಥಿತಿಯಲ್ಲಿರುವ ಮರವನ್ನು ಉಳಿಸಲು ಸಸ್ಯವೈದ್ಯರ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 21:23 IST
Last Updated 6 ನವೆಂಬರ್ 2019, 21:23 IST
ಮರದ ಬುಡದಲ್ಲಿ ಕೊರೆದಿರುವ ರಂಧ್ರಗಳನ್ನು ವಿಜಯ್‌ ನಿಶಾಂತ್‌ ಸ್ವಚ್ಛಗೊಳಿಸಿ ಚಿಕಿತ್ಸೆ ನೀಡಿದರು
ಮರದ ಬುಡದಲ್ಲಿ ಕೊರೆದಿರುವ ರಂಧ್ರಗಳನ್ನು ವಿಜಯ್‌ ನಿಶಾಂತ್‌ ಸ್ವಚ್ಛಗೊಳಿಸಿ ಚಿಕಿತ್ಸೆ ನೀಡಿದರು   

ಬೆಂಗಳೂರು: ರಾಜರಾಜೇಶ್ವರಿ ನಗರ ಬಿಇಎಂಎಲ್ ಲೇಔಟ್‌ನಲ್ಲಿರುವ ಪಂಚಶೀಲ ಬ್ಲಾಕ್‌ನ ಶಾಂತಿ ಮಾರ್ಗದ ಪಕ್ಕದಲ್ಲಿರುವ ಅರ್ಜುನ ಮರದ ಸುತ್ತಲೂ ರಂಧ್ರ ಕೊರೆದು ಆ್ಯಸಿಡ್‌ ಹಾಕಿ ಕೊಲ್ಲುವ ಯತ್ನ ನಡೆದಿದೆ.

ತಮ್ಮ ಹೊಸ ಮನೆಗೆ ಅಡ್ಡವಾಗಿದ್ದ ಮರವನ್ನು ಸಾಯಿಸುವ ಉದ್ದೇಶದಿಂದ ಸ್ಥಳೀಯ ವೈದ್ಯರೊಬ್ಬರು ಅದರ ಬುಡಕ್ಕೆ ರಂಧ್ರಕೊರೆದು ಆ್ಯಸಿಡ್‌ ಸುರಿದಿದ್ದಾರೆ ಎಂದು ಪಂಚಶೀಲ ಬ್ಲಾಕ್ ನಿವಾಸಿಗಳ ಸಂಘ ಆರೋಪಿಸಿದೆ. ಈ ಬಗ್ಗೆ ಬಿಬಿಎಂಪಿಯ ಅರಣ್ಯ ಘಟಕಕ್ಕೆ ದೂರು ನೀಡಿದೆ.

ವರ್ಷಗಳ ಹಿಂದೆ ಈ ವೈದ್ಯರು ಮನೆ ನಿರ್ಮಿಸುವಾಗ ಎರಡು ಮರಗಳನ್ನು ಕಡಿದಿದ್ದರು. ಇಲ್ಲಿಯವರೆಗೆ ಶಾಂತಿ ಮಾರ್ಗದ ಆಸುಪಾಸಿನಲ್ಲಿದ್ದ 5 ಮರಗಳನ್ನು ಕಡಿದಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ADVERTISEMENT

ಮರಕ್ಕೆ ಚಿಕಿತ್ಸೆ: ಈ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಸ್ಯ ವೈದ್ಯ ಡಾ.ವಿಜಯ್‌ ನಿಶಾಂತ್‌ ಮರಕ್ಕೆ ಚಿಕಿತ್ಸೆ ನೀಡಿ ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದರು.

42 ರಂಧ್ರ: ‘ಮರದ ಬುಡದಲ್ಲಿ ಒಟ್ಟು 42 ರಂಧ್ರಗಳನ್ನು ಕೊರೆಯಲಾಗಿದೆ. ಬುಡವನ್ನು ಸ್ವಚ್ಛಗೊಳಿಸಿ ಸುಣ್ಣ ಬೆರೆಸಿದ ನೀರನ್ನು ಉಣಿಸುವ ಮೂಲಕ ಬುಡಕ್ಕೆ ಸುರಿದ ಆ್ಯಸಿಡ್‌ನಿಂದ ಆಗುವ ಹಾನಿ ಕಡಿಮೆಗೊಳಿಸಲು ಪ್ರಯತ್ನಿಸಿದ್ದೇವೆ. 15 ದಿನಗಳಲ್ಲಿ ಮರಕ್ಕೆ ಪೋಷಕಾಂಶಗಳನ್ನು ಉಣಿಸುತ್ತೇನೆ’ ಎಂದು ವಿಜಯ್‌ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬುಡದಲ್ಲಿ 42 ರಂಧ್ರಗಳನ್ನು ಕೊರೆದಿದ್ದರೂ ಈ ಮರದ ತಿರುಳು ಗಟ್ಟಿಯಾಗಿದೆ. ಸತತ ಪ್ರಯತ್ನಪಟ್ಟರೆ ಮರ ಸಾಯದಂತೆ ತಡೆಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.