ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಜಯನಗರದಲ್ಲಿ ಮರದ ಕೊಂಬೆಗಳನ್ನು ಕಡಿದ ವಿಚಾರಕ್ಕೆ ಬಿಬಿಎಂಪಿ ಮಾಜಿ ಸದಸ್ಯರ ಪುತ್ರ ಹಾಗೂ ಸಾಮಾಜಿಕ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ದೂರು ಹಾಗೂ ಪ್ರತಿದೂರು ದಾಖಲಾಗಿದೆ.
ಜಯನಗರ ಆರನೇ ಬ್ಲಾಕ್‍ನ 20ನೇ ಡಿ ಮುಖ್ಯರಸ್ತೆಯಲ್ಲಿ ಬೆಳೆದಿದ್ದ ಬಾದಾಮಿ ಮರದಲ್ಲಿ ಹುಳುಗಳು ಹೆಚ್ಚಿ ಸ್ಥಳೀಯರಿಗೆ ಸಮಸ್ಯೆಯಾಗಿತ್ತು. ಹೀಗಾಗಿ, ಸ್ಥಳೀಯರ ಮನವಿಗೆ ಸ್ಪಂದಿಸಿ ಸಾಮಾಜಿಕ ಕಾರ್ಯಕರ್ತ ಗಣೇಶ್‍ಸಿಂಗ್ ಎಂಬುವರು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅಕ್ಟೋಬರ 9ರಂದು ಮರದ ಕೊಂಬೆಗಳನ್ನು ಕಡಿಸಿದ್ದರು.
ಆಗ ಸ್ಥಳಕ್ಕೆ ಹೋಗಿದ್ದ ಬಿಬಿಎಂಪಿ ಮಾಜಿ ಸದಸ್ಯರ ಪುತ್ರ ಸತೀಶ್‍ರೆಡ್ಡಿ, ಮರದ ಕೊಂಬೆಗಳನ್ನು ಕಡಿದ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗಣೇಶ್‍ಸಿಂಗ್ ಜತೆ ವಾಗ್ವಾದ ನಡೆಸಿದ್ದರು. ಬಳಿಕ ಜಗಳವಾಡಿ, ಕೈ ಮಿಲಾಯಿಸಿದ್ದಾರೆ. ಆಗ ಸತೀಶ್‍ರೆಡ್ಡಿ ಮತ್ತು ಅವರ ಮಗ ಚಿತ್ರರತ್ ಒಟ್ಟಾಗಿ ಗಣೇಶ್‍ಸಿಂಗ್‍ಗೆ ಹೆಲ್ಮೆಟ್ ಹಾಗೂ ದೊಣ್ಣೆಯಿಂದ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಗಣೇಶ್‍ಸಿಂಗ್ ಮತ್ತು ಅವರ ಕಡೆಯ ಚಂದ್ರ, ಅಯ್ಯಪ್ಪ ಎಂಬುವರು ಸತೀಶ್‍ರೆಡ್ಡಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಜಯನಗರ ಠಾಣೆ ಪೊಲೀಸರು ಹೇಳಿದ್ದಾರೆ.
ಘಟನೆ ಸಂಬಂಧ ಗಣೇಶ್‍ಸಿಂಗ್ ಮತ್ತು ಸತೀಶ್ ದೂರು-ಪ್ರತಿದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಮುಂದಿನ ಮರ ಕತ್ತರಿಸುತ್ತಿರುವುದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗಣೇಶ್ ಸಿಂಗ್, ಚಂದ್ರ ಮತ್ತು ಅಯ್ಯಪ್ಪ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಸೆಪ್ಟೆಂಬರ್ 9ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ನನ್ನ ಮನೆಯ ಬಳಿ ಇರುವ ಮರವನ್ನು ಕತ್ತರಿಸುತ್ತಿದ್ದರು. ಇದನ್ನು ಪ್ರಶ್ನಿಸಿದಕ್ಕೆ ಸ್ಥಳದಲ್ಲಿದ್ದ ವ್ಯಕ್ತಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಆ ವೇಳೆ ಗಣೇಶ ಎಂಬಾತ ಬಂದು, ತಾನು ಎನ್.ಆರ್.ರಮೇಶ್ ಕಡೆಯ ವ್ಯಕ್ತಿ ಎನ್ನುತ್ತಾ ಏಕಾಏಕಿ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಾನೆ’ ಎಂದು ಸತೀಶ್ ರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.
‘ಮಗ ಚಿತ್ರರತ್ ಬಂದು ನನ್ನನ್ನು ಕಾಪಾಡಿದ್ದಾನೆ. ಚಂದ್ರ, ಅಯ್ಯಪ್ಪ ಅವರು ನನ್ನ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಬಳಿಕ ಸಾಮಾಜಿಕ ಕಾರ್ಯಕರ್ತ ಗಣೇಶ್ ಸಹ ಪ್ರತಿ ದೂರು ನೀಡಿದ್ದಾರೆ.
‘ಜಯನಗರ 6ನೇ ಬ್ಲಾಕ್, 2ನೇ ಮುಖ್ಯ ರಸ್ತೆಯಲ್ಲಿರುವ ಸಾವಿತ್ರಿ ಮತ್ತು ಉಮಾ ಮಹೇಶ್ವರಿ ಮನೆಯ ಮುಂಭಾಗದ ಬಾದಾಮಿ ಮರದ ಅಪಾಯಕಾರಿ ಕೊಂಬೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದು ತೆರವು ಮಾಡಲಾಗುತ್ತಿತ್ತು. ಈ ವೇಳೆ ನಗರ ಪಾಲಿಕ ಮಾಜಿ ಸದಸ್ಯರೊಬ್ಬರ ಮಗ ಸತೀಶ್ ರೆಡ್ಡಿ ಸ್ಥಳಕ್ಕೆ ಬಂದು, ಕೆಲಸಕ್ಕೆ ಅಡ್ಡಿ ಪಡಿಸಿ, ನಿಂದಿಸಿದ್ದಾರೆ. ಸತೀಶ್ ಮತ್ತು ಅವರ ಮಗ ಹೆಲ್ಮೆಟ್ ಹಾಗೂ ದೊಣ್ಣೆಯಿಂದ ನನ್ನ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎರಡೂ ಕಡೆಯವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲರನ್ನು ಕರೆಸಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.