ADVERTISEMENT

ನಗರದಲ್ಲಿ 32 ನೇರ ಚಿಕಿತ್ಸಾ ಕೇಂದ್ರ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 3:35 IST
Last Updated 17 ಮೇ 2021, 3:35 IST

ಬೆಂಗಳೂರು: ಕೋವಿಡ್‌ ರೋಗಿಗಳು ಪ್ರಾಥಮಿಕ ಹಂತದಲ್ಲಿಯೇ ನೇರವಾಗಿ ಬಂದು ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಬಿಬಿಎಂಪಿಯು ನಗರದಲ್ಲಿ ಸ್ಥಾಪಿಸಿರುವ ನೇರ ಚಿಕಿತ್ಸಾ ಕೇಂದ್ರಗಳ (ಟ್ರಯಾಜ್ ಸೆಂಟರ್‌) ಸಂಖ್ಯೆ 32ಕ್ಕೆ ಏರಿದೆ.

ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ 26 ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿತ್ತು. ಇದರ ಜೊತೆಗೆ ಹೆಚ್ಚುವರಿಯಾಗಿ 6 ಟ್ರಯಾಜ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ.

ಈ ಕೇಂದ್ರಗಳಲ್ಲಿ ವೈದ್ಯರ ತಂಡವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಕೋವಿಡ್ ಸೋಂಕಿತರ ವೈದ್ಯಕೀಯ ಸ್ಥಿತಿಯನ್ನು ನೇರವಾಗಿ ತಿಳಿದು ಔಷಧೋಪಚಾರ ವ್ಯವಸ್ಥೆಯನ್ನು ತಕ್ಷಣ ಒದಗಿಸಲಾಗುತ್ತದೆ.

ADVERTISEMENT

ಇಲ್ಲಿ ಆಮ್ಲಜನಕ ಸೌಲಭ್ಯದ ಹಾಸಿಗೆಗಳಿದ್ದು, ಎಲ್ಲ ಪ್ರಾಥಮಿಕ ಆರೋಗ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಸೋಂಕಿನ ಸೌಮ್ಯ ಲಕ್ಷಣದ ರೋಗಿಗಳಿಗೆ ಚಿಕಿತ್ಸೆ ಆರೈಕೆ ನೀಡುವ ವ್ಯವಸ್ಥೆಯಿದೆ.

ಈ ಕೇಂದ್ರಗಳ ನೋಡಲ್ ಅಧಿಕಾರಿಗಳ ಸಂಪರ್ಕ ಸಂಖ್ಯೆ ಮತ್ತು ದಿನದ 24 ಗಂಟೆ ಕಾರ್ಯನಿರ್ವಹಿಸುವ ಕೇಂದ್ರಗಳ ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ. ಸದ್ಯ 26 ಕೇಂದ್ರಗಳಲ್ಲಿ 65 ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ.

ನಗರದ ಕೋವಿಡ್ ಆರೈಕೆ ಕೇಂದ್ರ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 2,486 ಹಾಸಿಗೆಗಳಿವೆ. 1,995 ಸಾಮಾನ್ಯ ಹಾಗೂ 491 ಆಮ್ಲಜನಕ ವ್ಯವಸ್ಥೆಯ ಹಾಸಿಗೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.