ADVERTISEMENT

ಚಿಕಿತ್ಸೆ ನಿರ್ಧಾರ ಕೇಂದ್ರಗಳ ಸಂಖ್ಯೆ ಶೀಘ್ರವೇ 60ಕ್ಕೆ ಹೆಚ್ಚಳ

ಹಾಸಿಗೆ ಹಂಚಿಕೆಗೆ ಕೋವಿಡ್‌ ಸೋಂಕಿತರ ಭೌತಿಕ ಪರೀಕ್ಷೆ : ಗೌರವ್ ಗುಪ್ತ

​ಪ್ರಜಾವಾಣಿ ವಾರ್ತೆ
Published 14 ಮೇ 2021, 21:21 IST
Last Updated 14 ಮೇ 2021, 21:21 IST
ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಸೋಂಕಿತರಿಗಾಗಿ ಇಂಡಿಯಾ ಫೌಂಡೇಷನ್ ವತಿಯಿಂದ ಬಿಎಂಟಿಸಿ ಸಿಬ್ಬಂದಿ ಸಹಕಾರದೊಂದಿಗೆ ‘ದಿ ಆಕ್ಸಿಜನ್ ಆನ್ ವ್ಹೀಲ್ಸ್’ ಬಸ್ ವ್ಯವಸ್ಥೆ ಮಾಡಲಾಗಿದ್ದು, ಕೆಲ ಸೋಂಕಿತರು ಪುರಭವನ ಎದುರು ಶುಕ್ರವಾರ ಬಸ್ಸಿನಲ್ಲಿ ಆಮ್ಲಜನಕ ಪಡೆದುಕೊಂಡರು – ಪ್ರಜಾವಾಣಿ ಚಿತ್ರ
ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಸೋಂಕಿತರಿಗಾಗಿ ಇಂಡಿಯಾ ಫೌಂಡೇಷನ್ ವತಿಯಿಂದ ಬಿಎಂಟಿಸಿ ಸಿಬ್ಬಂದಿ ಸಹಕಾರದೊಂದಿಗೆ ‘ದಿ ಆಕ್ಸಿಜನ್ ಆನ್ ವ್ಹೀಲ್ಸ್’ ಬಸ್ ವ್ಯವಸ್ಥೆ ಮಾಡಲಾಗಿದ್ದು, ಕೆಲ ಸೋಂಕಿತರು ಪುರಭವನ ಎದುರು ಶುಕ್ರವಾರ ಬಸ್ಸಿನಲ್ಲಿ ಆಮ್ಲಜನಕ ಪಡೆದುಕೊಂಡರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೋವಿಡ್‌ನಿಂದ ಬಳಲುವವರಿಗೆ ಯಾವರೀತಿಯ ಚಿಕಿತ್ಸೆ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ನಗರದ 26 ಕಡೆ ಚಿಕಿತ್ಸಾ ನಿರ್ಧಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳ ವೈದ್ಯರು ರೋಗಿಗಳನ್ನು ಭೌತಿಕವಾಗಿ ತಪಾಸಣೆ ಮಾಡಿ ಆಸ್ಪತ್ರೆಗಳಲ್ಲಿ ಸೂಕ್ತ ಹಾಸಿಗೆ ಸೌಲಭ್ಯ ಒದಗಿಸಲು ಶಿಫಾರಸು ಮಾಡಲಿದ್ದಾರೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಇಲ್ಲಿ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರ್ಧಾರ ಕೇಂದ್ರಗಳನ್ನು ಆರಂಭಿಸಿದ್ದೇವೆ. ಚಿಕಿತ್ಸೆ ನಿರ್ಧಾರ ಕೇಂದ್ರಗಳ ಸಂಖ್ಯೆಯನ್ನು ಶೀಘ್ರವೇ 60ಕ್ಕೆ ಹೆಚ್ಚಿಸಲಾಗುತ್ತದೆ. ಪ್ರತಿ ವಾರ್ಡ್‌ನಲ್ಲೂ ಇಂತಹ ಕೇಂದ್ರಗಳನ್ನು ಆರಂಭಿಸುವ ಚಿಂತನೆ ಹೊಂದಿದ್ದೇವೆ’ ಎಂದು ತಿಳಿಸಿದರು.

‘ನಾಗರಿಕರು ಕೊರೊನಾ ಸೋಂಕಿತರನ್ನು ಪಾಲಿಕೆಯ ಸಹಾಯವಾಣಿಗೆ ಕರೆ ಮಾಡದೆಯೇ ನೇರವಾಗಿ ಚಿಕಿತ್ಸೆ ನಿರ್ಧಾರ ಕೇಂದ್ರಗಳಿಗೆ ಕರೆದೊಯ್ಯಬಹುದು. ಸೋಂಕಿತರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿ ವೈದ್ಯರು ಅಗತ್ಯ ಸಲಹೆ ನೀಡಲಿದ್ದಾರೆ. ಅವರು ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದು ಆರೈಕೆ ಪಡೆಯಬೇಕೇ, ಕೋವಿಡ್ ಆರೈಕೆ ಕೇಂದ್ರದಲ್ಲಿ ಅಥವಾ ಹೆರಿಗೆ ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ ಸ್ಥಿರೀಕರಣ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬೇಕೇ ಎಂದು ಶಿಫಾರಸು ಮಾಡಲಿದ್ದಾರೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಆಸ್ಪತ್ರೆಗೆ ದಾಖಲಿಸುವುದಕ್ಕೂ ವ್ಯವಸ್ಥೆ ಕಲ್ಪಿಸಲಿದ್ದಾರೆ’ ಎಂದರು.

ADVERTISEMENT

‘ಚಿಕಿತ್ಸೆ ನಿರ್ಧಾರ ಕೇಂದ್ರಗಳಲ್ಲಿ ಹಾಸಿಗೆಗಳು ಹಾಗೂ ಆಮ್ಲಜನಕ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ. ತುರ್ತು ಸೇವೆಗೆ ವೈದ್ಯರನ್ನು, ಶುಶ್ರೂಷಕರನ್ನೂ ನಿಯೋಜಿಸಲಾಗಿದೆ. ವೈದ್ಯಕೀಯ ತಪಾಸಣೆಗಾಗಿ ಉಷ್ಣತಾ ಮಾಪಕ, ಪಲ್ಸ್ ಆಕ್ಸಿಮೀಟರ್ ಹಾಗೂ ಅವಶ್ಯಕ ಔಷಧ ಪೂರೈಸಲಾಗಿದೆ. ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುವ ಪ್ರತ್ಯೇಕ ದೂರವಾಣಿ ಸಂಪರ್ಕ ಸಂಖ್ಯೆಯನ್ನು ಒದಗಿಸಲಾಗಿದೆ’ ಎಂದರು.

ವಿಶೇಷ ಆಯುಕ್ತ ರಂದೀಪ್, ‘ಇದುವರೆಗೂ ಕೋವಿಡ್‌ ಸೋಂಕಿತರಿಗೆ ಹಾಸಿಗೆ ಕಾಯ್ದಿರಿಸುವ ಬಗ್ಗೆ ವಾರ್ ರೂಂನ ಸಹಾಯವಾಣಿ ಮೂಲಕ ದೂರವಾಣಿ ಕರೆ ಆಧರಿಸಿ ವೈದ್ಯರ ತಂಡವು ನಿರ್ಧರಿಸುತ್ತಿತ್ತು. ಆದರೆ, ಇನ್ನು ಚಿಕಿತ್ಸೆ ನಿರ್ಧಾರ ಕೇಂದ್ರಗಳಲ್ಲಿ ಭೌತಿಕವಾಗಿ ತಪಾಸಣೆ ನಡೆಸಿದ ಬಳಿಕವೇ ಈ ಕುರಿತ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ಚಿಕಿತ್ಸಾ ನಿರ್ಧಾರ ಕೇಂದ್ರಗಳು ಕೋವಿಡ್‌ ಆರೈಕೆ ಕೇಂದ್ರಗಳೊಂದಿಗೆ ಜೋಡಣೆಗೊಂಡಿವೆ. ಇಲ್ಲಿ ಆಮ್ಲಜನಕ ಸಾಂದ್ರಕಗಳು, ಆಮ್ಲಜನಕ ಪೂರೈಕೆ ವ್ಯವಸ್ಥೆ ಇರಲಿದೆ. ರೋಗಿಯ ರಕ್ತದಲ್ಲಿ ಆಮ್ಲಜನಕ ಮಟ್ಟ 85ರವರೆಗೆ ಇಳಿದಿದ್ದರೂ ಈ ಕೇಂದ್ರಗಳಲ್ಲೇ ಆಮ್ಲಜನಕ ಪೂರೈಕೆ ಮಾಡುವ ಮೂಲಕ ಸ್ಥಿರೀಕರಿಸಬಹುದು. ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದರೆ ವಾರ್ ರೂಂಗೆ ಕರೆ ಮಾಡಿ ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಲು ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಯಾವುದೇ ರೋಗಿಗೆ ಉನ್ನತ ಚಿಕಿತ್ಸೆಯ ಅಗತ್ಯವನ್ನು ತ್ವರಿತವಾಗಿ ಪತ್ತೆ ಹಚ್ಚುವುದು ನಮ್ಮ ಉದ್ದೇಶ. ತೀವ್ರ ಅವಲಂಬನೆಯ ಘಟಕ (ಎಚ್‌ಡಿಯು) ಅಥವಾ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಹಾಸಿಗೆ ಲಭ್ಯವಾದ ತಕ್ಷಣ ರೋಗಿಗಳನ್ನುಆದ್ಯತೆ ಆಧಾರದಲ್ಲಿ ಅಲ್ಲಿಗೆ ವರ್ಗಾಯಿಸಲಾಗುತ್ತದೆ. ಆಯುಷ್‌ ಆಸ್ಪತ್ರೆಗಳನ್ನು ಹಾಗೂ ಹಾಸಿಗೆ ಸೌಲಭ್ಯ ಇರುವ ಆಸ್ಪತ್ರೆಗಳನ್ನೂ ಚಿಕಿತ್ಸಾ ನಿರ್ಧಾರ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತದೆ’ ಎಂದರು.

ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್, ‘ಚಿಕಿತ್ಸೆ ನಿರ್ಧಾರ ಕೇಂದ್ರದಲ್ಲಿ ತಲಾ ಮೂವರು ವೈದ್ಯರು ಹಾಗೂ ಶುಶ್ರೂಷಕರು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ. 256 ವೈದ್ಯರು ಮತ್ತು ಶುಶ್ರೂಷಕರನ್ನು ನಿಯೋಜಿಸಲಾಗಿದೆ. ವಾರ್ಡ್ ಸಮಿತಿಯ ನೋಡಲ್ ಅಧಿಕಾರಿಗಳನ್ನೇ ಚಿಕಿತ್ಸಾ ನಿರ್ಧಾರ ಕೇಂದ್ರಗಳ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಮನೆಯಲ್ಲೇ ಆರೈಕೆ ಪಡೆಯುವವರಿಗೆ ಈ ಕೇಂದ್ರಗಳಲ್ಲೇ ಔಷಧ ಕಿಟ್‌ ಒದಗಿಸಲಾಗುತ್ತದೆ’ ಎಂದು ತಿಳಿಸಿದರು.

ಜಂಟಿ ಆಯುಕ್ತ ಸರ್ಫರಾಜ್ ಖಾನ್, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ.ಬಿ.ಕೆ.ವಿಜಯೇಂದ್ರ (ಸಾರ್ವಜನಿಕ ಆರೋಗ್ಯ), ಡಾ.ನಿರ್ಮಲಾ ಬುಗ್ಗಿ (ಕ್ಲಿನಿಕಲ್‌) ಉಪಸ್ಥಿತರಿದ್ದರು.

ಸಾವಿರ ವೈದ್ಯರನ್ನು ಒದಗಿಸಲು ಕೋರಿಕೆ
‘1 ಸಾವಿರ ವೈದ್ಯರು ಹಾಗೂ 1 ಸಾವಿರ ಶುಶ್ರೂಷಕರನ್ನು ಒದಗಿಸುವಂತೆ ಸರ್ಕಾರವನ್ನು ಕೋರಿದ್ದೇವೆ. ಮೊದಲ ಹಂತದಲ್ಲಿ 106 ವೈದ್ಯರನ್ನು ಒದಗಿಸಿದ್ದಾರೆ’ ಎಂದು ಗೌರವ್ ಗುಪ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.