ADVERTISEMENT

ಹುತಾತ್ಮ ಯೋಧರ ಕುಟುಂಬಕ್ಕೆ ಗೌರವ

ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕಾರ್ಯಕ್ಕೆ ಕಿರಣ ಕುಮಾರ್ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 20:54 IST
Last Updated 15 ನವೆಂಬರ್ 2022, 20:54 IST
‘ಸಮರ್ಪಣ – 2022’ ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಯೋಧ ಬೆಳ್ಳಿಯಪ್ಪ ಅವರ ಪತ್ನಿ ಕವಿತಾ ಬೆಳ್ಳಿಯಪ್ಪ, ಸಿಪಾಯಿ ಚಾಂದ್ ಪಾಷಾ ಅವರ ತಾಯಿ ಗುಣಸಾಗರಿ ಆರ್. ಮತ್ತು ವಿರೇಶ್ ಕುರಹಟ್ಟಿ ಅವರ ಪತ್ನಿ ಲಲಿತಾ ಕುರಹಟ್ಟಿ ಅವರನ್ನು ಸನ್ಮಾನಿಸಲಾಯಿತು. (ನಿಂತವರು ಎಡದಿಂದ) ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಜೆ. ಸೂರ್ಯಪ್ರಸಾದ್, ಶಕುಂತಲಾ ಭಂಡಾರ್ಕರ್, ಎ.ಎಸ್. ಕಿರಣ್‌ ಕುಮಾರ್, ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೆ.ಎಸ್. ಶ್ರೀಧರ್, ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಕೇಶವ್ ಬಿ.ಕೆ.ಹಾಗೂ ಡೀನ್ ವಿ. ಕೃಷ್ಣ ಇದ್ದಾರೆ. –ಪ್ರಜಾವಾಣಿ ಚಿತ್ರ

ಬೆಂಗಳೂರು: ದೇಶಕ್ಕಾಗಿ ಗಡಿಯಲ್ಲಿ ಹೋರಾಡಿ, ಹುತಾತ್ಮರಾದ ವೀರ ಯೋಧರ ಕುಟುಂಬದ ಸದಸ್ಯರಿಗೆ ಇಲ್ಲಿನ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗೌರವ ಸಮರ್ಪಿಸಿದರು.

ನಗರದಲ್ಲಿ ವಿಶ್ವವಿದ್ಯಾಲಯ ಮಂಗಳವಾರ ಹಮ್ಮಿಕೊಂಡ ‘ಸಮರ್ಪಣ–2022’ ಕಾರ್ಯಕ್ರಮದಲ್ಲಿ ಅಗಲಿದ ಯೋಧರನ್ನು ಸ್ಮರಿಸಿಕೊಳ್ಳಲಾಯಿತು. ವಿದ್ಯಾರ್ಥಿಗಳು ಚಿತ್ರೀಕರಿಸಿದ ವಿಶೇಷ ಗೀತೆಯನ್ನು ಸೈನಿಕರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಪ್ರಸ್ತುತಪಡಿಸಲಾಯಿತು. ಗೌರವ ಸ್ವೀಕರಿಸಿದ ಯೋಧರ ಕುಟುಂಬದ ಸದಸ್ಯರು, ಭಾವುಕರಾಗಿದ್ದರು. ಅಗಲಿದ ಪತಿ, ಪುತ್ರ, ಸಹೋದರನ ಹೆಸರು ಎಲ್‌ಇಡಿ ಪರದೆಯ ಮೇಲೆ ಮೂಡುತ್ತಿದ್ದಂತೆ ನೆರೆದಿದ್ದ ಕುಟುಂಬಗಳ ಸದಸ್ಯರ ಕಣ್ಣು ಒದ್ದೆಯಾಗಿದ್ದವು.

ಕೆ.ಪಿ. ಬೆಳ್ಳಿಯಪ್ಪ,ಚಾಂದ್ ಪಾಷಾ, ವೀರೇಶ ಕುರಹಟ್ಟಿ,ಉಮೇಶಪ್ಪ ಕೆ.,ಹುಸೇನ್ ಸಾಬ್ ಎಫ್., ವರುಣ್ ಮನೋಹರ್, ಸದಾಶಿವ ಪಡಲೆ, ಅಥಾವುಲ್ಲಾ ಪಾರಾ, ಈರಪ್ಪ ನಂದಿಹಳ್ಳಿ, ನಾಗೇಶ್ ಟಿ.ಟಿ., ಉಮೇಶ್ ಎಂ., ಕೆ. ತಿಮ್ಮಯ್ಯ, ಯಶವಂತ್ ಡಿ., ಚಂದ್ರಕಾಂತ್ ಪಾಟೀಲ, ಶಿವಬಸಯ್ಯ ಕುಲಕರ್ಣಿ, ಭರ್ಮಾ ಕುತಾಲೆ, ಸಂದೀ‍ಪ್ ನಾಯ್ಕ್, ಮಹಾದೇವ್ ಪಾಟೀಲ, ಪ್ರಶಾಂತ್ ಎ.ಪಿ., ಡಿ. ಡೇವಿಡ್, ಮಲ್ಲಪ್ಪ ಹುಲ್ಹಲೈ, ಡಿ.ಬಿ.ಗಾಯಕ್ವಾಡ್ ಹಾಗೂ ಅಮೀರ್ ಮಿಯಾನ್ ಅವರ ಕುಟುಂಬದ ಸದಸ್ಯರನ್ನು ಗೌರವಿಸಲಾಯಿತು.

ADVERTISEMENT

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್, ‘ನಾವು ಸಮಾಜದಲ್ಲಿ ಶಾಂತಿಯುತ ಜೀವನ ನಡೆಸಲು ಹಾಗೂವಿವಿಧ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಲು ಯೋಧರು ತಮ್ಮ ಜೀವನವನ್ನು ಸಮರ್ಪಣೆ ಮಾಡುತ್ತಾರೆ. ಕೆಲವು ವೇಳೆ ದೇಶಕ್ಕಾಗಿ ಜೀವವನ್ನೂ ಅರ್ಪಿಸಬೇಕಾಗುತ್ತದೆ. ಇಂತಹ ವೀರ ಯೋಧರ ಕುಟುಂಬದ ದುಃಖವನ್ನು ಯಾರಿಂದಲೂ ನಿವಾರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಈ ಮೊದಲು ದೇಶದ ಮೇಲೆ ಹೊರಗಡೆಯವರು ದಾಳಿ ನಡೆಸುವ ಸಾಧ್ಯತೆಗಳಿರುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿನ ಕೆಲವರು ದೇಶ ವಿರೋಧಿ ಕೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ವಿವಿಧ ಕಾರ್ಯಚಟುವಟಿಕೆಯಲ್ಲಿ ನಿರತರಾಗುತ್ತಿದ್ದಾರೆ. ಹೀಗಾಗಿ, ದೇಶದ ಒಳಗಡೆಯೂ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನಿಂದ ಜಾಗತಿಕ ಹಾಗೂ ದೇಶೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.ಕೃತಕ ಬುದ್ಧಿಮತ್ತೆ ಸೇರಿ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.