ADVERTISEMENT

ಲಾರಿ ಮಾಲೀಕರೊಂದಿಗೆ ಸಚಿವ ರಾಮಲಿಂಗಾರೆಡ್ಡಿ ಸಂಧಾನ: ಮುಷ್ಕರ ಅಂತ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 16:09 IST
Last Updated 17 ಏಪ್ರಿಲ್ 2025, 16:09 IST
<div class="paragraphs"><p>ಸಾರಿಗೆ ಸಚಿವ ರಾಮಲಿಂಗಾರೆಡ್ಡಿ</p></div>

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

   

ಬೆಂಗಳೂರು: ನಾಲ್ಕು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರವನ್ನು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಗುರುವಾರ ವಾಪಸ್‌ ಪಡೆದಿದೆ.

ಸಂಘದ ಪದಾಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ನಡೆಸಿದರು. ಡೀಸೆಲ್‌ ಬೆಲೆ ಇಳಿಸುವ, ಟೋಲ್‌ ರದ್ದು ಮಾಡುವ ಬೇಡಿಕೆಗಳನ್ನು ಹೊರತುಪಡಿಸಿ, ಉಳಿದ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದರಿಂದ ಮುಷ್ಕರ ಅಂತ್ಯಗೊಂಡಿದೆ.

ADVERTISEMENT

ರಾಜ್ಯ ಸರ್ಕಾರ ಏರಿಕೆ ಮಾಡಿರುವ ಡೀಸೆಲ್‌ ದರ ಇಳಿಕೆ, ರಾಜ್ಯ ಹೆದ್ದಾರಿ ಟೋಲ್‌ ರದ್ದು, ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್‌ನೆಸ್‌ ಸರ್ಟಿಫಿಕೆಟ್‌) ನವೀಕರಣ ಶುಲ್ಕ ಹೆಚ್ಚಿಸುವ ಕೇಂದ್ರ ಸರ್ಕಾರದ ಮಾರ್ಗಸೂಚಿ ನಿರಾಕರಣೆ, ನಗರಗಳಿಗೆ ಸರಕು ಸಾಗಾಣಿಕೆ ವಾಹನಗಳ ಪ್ರವೇಶ ನಿರ್ಬಂಧ ಸಡಿಲಿಕೆಗಾಗಿ ಭಾನುವಾರ ರಾತ್ರಿಯಿಂದ ಲಾರಿ ಮುಷ್ಕರ ಆರಂಭವಾಗಿತ್ತು.

ಗುರುವಾರ ಸಂಜೆ ಸಭೆ ನಡೆಸಿದ ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ , ‘ಲಾರಿ ಮಾಲೀಕರು ವಿವಿಧ ಬೇಡಿಕೆಗಳನ್ನು ಇಟ್ಟಿದ್ದಾರೆ. ಆನ್‌ಲೈನ್‌ನಲ್ಲಿ ದಂಡ ಪಾವತಿಗೆ ವ್ಯವಸ್ಥೆಯನ್ನು ಜಾರಿ ಮಾಡಲಿದ್ದೇವೆ. ಹಲವು ವರ್ಷಗಳಿಂದ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡವರಿಗೆ ಒಂದು ಬಾರಿಯ ತೀರುವಳಿಗೆ (ಒನ್ ಟೈಮ್‌ ಸೆಟ್ಲ್‌ಮೆಂಟ್‌) ಅವಕಾಶ ಕಲ್ಪಿಸಲು ಕೋರಿದ್ದಾರೆ. ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಒಟಿಎಸ್‌ ಅವಕಾಶ ನೀಡಲಾಗುವುದು. ಟೋಲ್‌ ವಿಚಾರ ಕೂಡ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು’ ಎಂದು ಮಾಹಿತಿ ನೀಡಿದರು.

ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಅಧ್ಯಕ್ಷ ಜಿ.ಆರ್‌. ಷಣ್ಮುಖಪ್ಪ ಪ್ರತಿಕ್ರಿಯಿಸಿ, ‘ಗಡಿ ತನಿಖಾ ಠಾಣೆ ಸಮಸ್ಯೆಯನ್ನು ಮೂರು ತಿಂಗಳಲ್ಲಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಡೀಸೆಲ್ ದರವನ್ನು ಹಿಂದಿನ ಸರ್ಕಾರ 2023ಕ್ಕಿಂತ ಮೊದಲು ಯದ್ವಾತದ್ವಾ ಏರಿಕೆ ಮಾಡಿತ್ತು. ಆ ಬಗ್ಗೆ ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ. ನಗರಗಳಿಗೆ ಸರಕು ವಾಹನಗಳ ಪ್ರವೇಶಕ್ಕೆ ಕೇವಲ 5 ಗಂಟೆ ಅವಕಾಶ ನೀಡಿರುವ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಎಫ್‌ಸಿ) ನವೀಕರಣಕ್ಕೆ ₹13 ಸಾವಿರ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಒಪ್ಪಿಕೊಳ್ಳದೇ ಕಡಿಮೆ ಮಾಡಲು ಪತ್ರ ಬರೆಯುವುದಾಗಿ ಹೇಳಿದ್ದಾರೆ. ಪೊಲೀಸರ ಕಿರುಕುಳ ತಪ್ಪಿಸಲು ಹೇಳಿದ್ದೇವೆ’ ಎಂದು ತಿಳಿಸಿದರು.

‘ಲಾರಿ ಮುಷ್ಕರದಿಂದಾಗಿ ದಿನಕ್ಕೆ ₹4,500 ಕೋಟಿ ನಷ್ಟವಾಗಿದೆ. ನಮ್ಮ ಬೇಡಿಕೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಮುಷ್ಕರ ಕೊನೆಗೊಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.