ADVERTISEMENT

ಸುರಂಗ ರಸ್ತೆ: ಸಲ್ಲಿಕೆಯಾಗದ ವರದಿ 

ಲಾಲ್‌ಬಾಗ್‌ನಲ್ಲಿ ನಿರ್ಮಾಣ ವಿವರ ಕೇಳಿರುವ ತೋಟಗಾರಿಕೆ ಇಲಾಖೆ; ಸಮಯಾವಕಾಶ ಕೇಳಿದ ಬಿ–ಸ್ಮೈಲ್‌

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 18:38 IST
Last Updated 3 ನವೆಂಬರ್ 2025, 18:38 IST
‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಎಂ.ಜಿ. ರಸ್ತೆ ಬಳಿ ನಿರ್ಮಾಣಗೊಂಡಿರುವ ಸುರಂಗ ಮಾರ್ಗ (ಸಾಂದರ್ಭಿಕ ಚಿತ್ರ)
‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಎಂ.ಜಿ. ರಸ್ತೆ ಬಳಿ ನಿರ್ಮಾಣಗೊಂಡಿರುವ ಸುರಂಗ ಮಾರ್ಗ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸುರಂಗ ರಸ್ತೆ ಸಂಪೂರ್ಣ ಮಾಹಿತಿಯನ್ನು ತೋಟಗಾರಿಕೆ ಇಲಾಖೆ ಕೇಳಿದ್ದು, ಇದನ್ನು ಒದಗಿಸಲು ಬಿ–ಸ್ಮೈಲ್‌ ಸಮಯಾವಕಾಶ ಕೇಳಿದೆ.

ಲಾಲ್‌ಬಾಗ್‌ನಲ್ಲಿ ಸುಮಾರು 6 ಎಕರೆ ಭೂಮಿಯನ್ನು ಬಳಸಿಕೊಂಡು ಸುರಂಗ ರಸ್ತೆ ನಿರ್ಮಿಸಲಾಗುತ್ತದೆ ಎಂದು ಸುರಂಗ ಮಾರ್ಗ ನಿರ್ಮಾಣದ ಹೊಣೆ ಹೊತ್ತಿರುವ ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ನಿಯಮಿತದ (ಬಿ–ಸ್ಮೈಲ್) ವತಿಯಿಂದ  ತೋಟಗಾರಿಕೆ ಇಲಾಖೆಗೆ 15 ದಿನಗಳ ಹಿಂದೆ ಪತ್ರ ಬರೆಯಲಾಗಿತ್ತು.

‘ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಯಾವ ಭಾಗದಲ್ಲಿ ಯಾವ ರೀತಿಯ ನಿರ್ಮಾಣ ಕಾಮಗಾರಿಗಳು ನಡೆಯಲಿವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಒದಗಿಸಿ’ ಎಂದು ತೋಟಗಾರಿಕೆ ಇಲಾಖೆಯಿಂದ ಬಿ–ಸ್ಮೈಲ್‌ಗೆ ಮರುಪತ್ರ ಬರೆಯಲಾಗಿದೆ. ಆದರೆ, ಈವರೆಗೆ ಬಿ–ಸ್ಮೈಲ್‌ ಸಂಪೂರ್ಣ ಮಾಹಿತಿಯನ್ನು ಒದಗಿಸಿಲ್ಲ.

ADVERTISEMENT

‘ಬಿ–ಸ್ಮೈಲ್‌ ಸಂಪೂರ್ಣ ವರದಿ ಸಲ್ಲಿಸಿದ ಮೇಲೆ ಅದನ್ನು ಆಧರಿಸಿ ಲಾಲ್‌ಬಾಗ್‌ ಉದ್ಯಾನದ ಮೇಲಾಗುವ ಪರಿಣಾಮವನ್ನು ತಜ್ಞರ ಸಲಹೆ– ಅಭಿಪ್ರಾಯಗಳೊಂದಿಗೆ ವಾಸ್ತವ ವರದಿ ತಯಾರಿಸಲಾಗುತ್ತದೆ. ಈ ವರದಿಯನ್ನು ತೋಟಗಾರಿಕೆ ಇಲಾಖೆ ಕಾರ್ಯದರ್ಶಿಯವರ ಮೂಲಕ ಇಲಾಖೆ ಸಚಿವರಿಗೆ ತಲುಪಿಸಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಶಾಫ್ಟ್‌: ಸುರಂಗ ಮಾರ್ಗಕ್ಕೆ ಬೆಂಗಳೂರು ಉತ್ತರ ತಾಲ್ಲೂಕು ಕಸಬಾ ಹೋಬಳಿಯ ನಾಲ್ಕು ಸರ್ವೆ ನಂಬರ್‌ಗಳಲ್ಲಿ ಲಾಲ್‌ಬಾಗ್‌ನ ಆರು ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್‌) ಪ್ರವೇಶ–ನಿರ್ಗಮನದ ರ‍್ಯಾಂಪ್‌ನೊಂದಿಗೆ ಅಲೈನ್‌ಮೆಂಟ್‌ ವಿವರಿಸಲಾಗಿದೆ.

ಲಾಲ್‌ಬಾಗ್‌ ಸಿದ್ದಾಪುರ ಮುಖ್ಯರಸ್ತೆಯಲ್ಲಿ ಲಾಲ್‌ಬಾಗ್‌ ದಕ್ಷಿಣ ಗೇಟ್‌ (ಸಿದ್ದಾಪುರ ಗೇಟ್‌) ಪ್ರವೇಶದ್ವಾರ ಸೇರಿದಂತೆ ಕಸಬಾ ಹೋಬಳಿಯ ಲಾಲ್‌ಬಾಗ್‌, ಅಣ್ಣಿಪುರ, ಅರೆಕೆಂಪನಹಳ್ಳಿ, ಸಿದ್ದಾಪುರ ಗ್ರಾಮಗಳು ಬರುವ ವಿಶ್ವೇಶ್ವರ ಪುರ ವಾರ್ಡ್‌ನಲ್ಲಿ 2.56 ಲಕ್ಷಕ್ಕೂ ಹೆಚ್ಚು ಚದರಡಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಡಿಪಿಆರ್‌ನಲ್ಲಿ ಅಲೈನ್‌ಮೆಂಟ್‌ ಅನ್ನು ಗುರುತಿಸಲಾಗಿದೆ. ಸುರಂಗ ರಸ್ತೆಯ ಪ್ರವೇಶ ಮತ್ತು ನಿರ್ಗಮನ ಪ್ರದೇಶದಲ್ಲಿ ಬಸ್‌ ನಿಲ್ದಾಣ, ಆಟೊ–ಟ್ಯಾಕ್ಸಿ ನಿಲ್ದಾಣ, ಮಾರುಕಟ್ಟೆಯಂತಹ ಸೌಲಭ್ಯಗಳನ್ನು ಕಲ್ಪಿಸಲು ಸಿದ್ದಾಪುರ ಗೇಟ್‌ ಒಳಗಿನ ಲಾಲ್‌ಬಾಗ್‌ನಲ್ಲಿ ‘ಶಾಫ್ಟ್‌’ ನಿರ್ಮಿಸಲು ಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.