ADVERTISEMENT

ತುರಹಳ್ಳಿ ಟ್ರೀ ಪಾರ್ಕ್‌ಗೆ ತಾತ್ಕಾಲಿಕ ತಡೆ

ಮಿಷನ್ 2022 ಪಟ್ಟಿಯಿಂದಲೂ ಕೈಬಿಡಲು ಕ್ರಮ: ಅರಣ್ಯ ಸಚಿವ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 20:48 IST
Last Updated 17 ಫೆಬ್ರುವರಿ 2021, 20:48 IST
ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರ ಸಾರ್ವಜನಿಕರೊಂದಿಗೆ ಬುಧವಾರ ಚರ್ಚೆ ನಡೆಸಿದರು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇದ್ದಾರೆ
ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರ ಸಾರ್ವಜನಿಕರೊಂದಿಗೆ ಬುಧವಾರ ಚರ್ಚೆ ನಡೆಸಿದರು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇದ್ದಾರೆ   

ಬೆಂಗಳೂರು: ತುರಹಳ್ಳಿ ಮೀಸಲು ಅರಣ್ಯಪ್ರದೇಶದಲ್ಲಿ ‘ವೃಕ್ಷೋದ್ಯಾನ’ (ಟ್ರೀ ಪಾರ್ಕ್) ನಿರ್ಮಿಸುವ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ನೈಸರ್ಗಿಕ ಕಾಡಿನ38 ಎಕರೆ ಪ್ರದೇಶದಲ್ಲಿ ವೃಕ್ಷೋದ್ಯಾನ ನಿರ್ಮಿಸುವುದಕ್ಕೆ ಪರಿಸರವಾದಿಗಳು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಈ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯರು ಹಾಗೂ ಪರಿಸರ ಕಾರ್ಯಕರ್ತರು ಸರಣಿ ಪ್ರತಿಭಟನೆಗಳನ್ನು ನಡೆಸಿದ್ದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ‘ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಟ್ರೀ ಪಾರ್ಕ್‌ ನಿರ್ಮಾಣ ಯೋಜನೆಗೆ ತಾತ್ಕಾಲಿಕ ತಡೆ ನೀಡಲಾಗಿದೆ’ ಎಂದು ಘೋಷಿಸಿದರು.

ಈ ಯೋಜನೆ ಕುರಿತು ಸ್ಥಳೀಯ ನಿವಾಸಿಗಳೊಂದಿಗೆ ಅರವಿಂದ ಲಿಂಬಾವಳಿ ಮತ್ತು ಈ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಬುಧವಾರ ಸಭೆ ನಡೆಸಿದರು.

ADVERTISEMENT

‘ಮಿಷನ್‌ 2022 ಯೋಜನೆಯ ಪಟ್ಟಿಯಿಂದಲೂ ಈ ಪ್ರಸ್ತಾವವನ್ನು ಕೈಬಿಡಲಾಗುವುದು’ ಎಂದು ಲಿಂಬಾವಳಿ ಭರವಸೆ ನೀಡಿದರು.

ಈಗಿನ ಟ್ರೀ ಪಾರ್ಕ್ ಅಭಿವೃದ್ಧಿ:ತುರಹಳ್ಳಿ ಅರಣ್ಯ ಪ್ರದೇಶ ಒತ್ತುವರಿಯಾಗಿದ್ದು, ತೆರವುಗೊಳಿಸಲಾಗಿರುವ ಪ್ರದೇಶದಲ್ಲಿ ಈಗಾಗಲೇ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಈ ಪಾರ್ಕ್ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಅದನ್ನು ಉನ್ನತೀಕರಿಸಲಾಗುವುದು ಎಂದು ಅರಣ್ಯ ಸಚಿವರು ತಿಳಿಸಿದರು.

‘ಕಾಡು ಉಳಿಸಬೇಕು ಎಂಬ ಸಾರ್ವಜನಿಕರ ಕಳಕಳಿ ನಿಜಕ್ಕೂ ಮೆಚ್ಚುವಂಥದ್ದು. ನಿಮ್ಮನ್ನು ಅದಕ್ಕಾಗಿ ಅಭಿನಂದಿಸುತ್ತೇನೆ’ ಎಂದೂ ಹೇಳಿದರು.

‘ನಮ್ಮ ಯೋಜನೆಯ ಅಂತಿಮ ಉದ್ದೇಶ ಅರಣ್ಯದ ರಕ್ಷಣೆಯೇ ಆಗಿದೆ. ಆದರೆ ಅದನ್ನು ಪ್ರಾಕೃತಿಕವಾಗಿ ಬಿಡಬೇಕು ಎಂಬ ನಿಮ್ಮ ಸಲಹೆಯನ್ನು ನಾನು ಗೌರವಿಸುತ್ತೇನೆ. ಮುಂದೆ ಇದರ ಬಗ್ಗೆ ಇನ್ನೂ ಹೆಚ್ಚಿನ ವಿಚಾರ ವಿನಿಮಯ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಅವರು ತಿಳಿಸಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ‘ಹೊಸ ಟ್ರೀ ಪಾರ್ಕ್ ನಿರ್ಮಿಸುವ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ. ಈ ಬಗ್ಗೆ ಸಚಿವರ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಸೂಕ್ತ ಕ್ರಮ ಕೈಗೊಳ್ಳುವರು’ ಎಂದು ವಿವರಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ಪ್ರಜಾವಾಣಿ’ಯ ಫೆ.8ರ ಸಂಚಿಕೆಯಲ್ಲಿ ‘ತುರಹಳ್ಳಿ ಕಾಡು ಕೆಡಿಸಲು ತರಾತುರಿ’ ಶೀರ್ಷಿಕೆಯ ವಿಶೇಷ ವರದಿ ಪ್ರಕಟವಾಗಿತ್ತು. ಈ ಕಾಡನ್ನು ಕಳೆದುಕೊಂಡರೆ ಭವಿಷ್ಯದಲ್ಲಿ ಆಗಲಿರುವ ಪರಿಣಾಮಗಳ ಬಗ್ಗೆ ಪರಿಸರ ಕಾರ್ಯಕರ್ತರು ಹಾಗೂ ಸ್ಥಳೀಯರು ವ್ಯಕ್ತಪಡಿಸಿದ ಕಳವಳಕ್ಕೆ ಪತ್ರಿಕೆ ಧ್ವನಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.