ADVERTISEMENT

ರಾತ್ರಿಯಿಡೀ ಜೋರು ಮಳೆ: ತಾವರೆಕೆರೆಯ ಶೀಗೆಹಳ್ಳಿ ಕಾಲುವೆಯಲ್ಲಿ 2 ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 4:20 IST
Last Updated 18 ಜೂನ್ 2022, 4:20 IST
   

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿಯಿಡೀ ಭಾರಿ ಮಳೆ ಆಗಿದ್ದು, ಕಾಲುವೆಗಳು ತುಂಬಿ ಹರಿದವು. ಬೆಂಗಳೂರಿನಲ್ಲಿ ಕಾಲುವೆಗೆ ಬಿದ್ದಿದ್ದರು ಎನ್ನಲಾದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು, ಅವರ ಮೃತದೇಹಗಳು ತೇಲಿಕೊಂಡು ಹೋಗಿವೆ.

ಮಾಗಡಿ ಮುಖ್ಯ ರಸ್ತೆಯ ತಾವರೆಕೆರೆಯ ಶೀಗೆಹಳ್ಳಿ ಬಳಿ ಕಾಲುವೆಯಲ್ಲಿ ಮೃತದೇಹಗಳು ಸಿಕ್ಕಿದ್ದು, ಎಸ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಾಚರಣೆ ‌ನಡೆಸಿ ಮೃತದೇಹ ಹೊರಗೆ ತೆಗೆದಿದ್ದಾರೆ. ಹೆಸರು ಗೊತ್ತಾಗಿಲ್ಲ.
ಹೊರಮಾವು ವಡ್ಡರಪಾಳ್ಯದ ಸಾಯಿ‌ ಲೇಔಟ್ ಮತ್ತೆ ಜಲಾವೃತಗೊಂಡಿದೆ.
'ಮಳೆ ಬಂದಾಗಲೆಲ್ಲ ನೀರು ನುಗ್ಗುವುದು ಇಲ್ಲಿ ಸಾಮಾನ್ಯವಾಗಿದೆ.

ರಾತ್ರಿ 9 ಗಂಟೆ ವೇಳೆಗೆ ಮಳೆ‌ ಶುರುವಾಯಿತು. 11 ಗಂಟೆಯಷ್ಟರಲ್ಲಿ ಮನೆಗಳಿಗೆ‌ ನೀರು ನುಗ್ಗಿತು. ಮನೆಯಲ್ಲಿನ ಎಲ್ಲ ವಸ್ತುಗಳು ನೀರುಪಾಲಾಗಿವೆ. ಇಡೀ ರಾತ್ರಿ ನಿದ್ರೆಯಿಲ್ಲದೆ ನೀರು ಹೊರಹಾಕಲು ಪರದಾಡಿದ್ದೇವೆ' ಎಂದು ಸಾಯಿ ಲೇಔಟ್‌ನ ಜಾನ್ ಹೇಳಿದರು.

ADVERTISEMENT

'ಮೇ ತಿಂಗಳಲ್ಲಿ ಮಳೆ ಸುರಿದಾಗಲೂ ಮೂರ್ನಾಲ್ಕು ದಿನ ಇಡೀ ಬಡಾವಣೆಯಲ್ಲಿ ನೀರು ನಿಂತಿತ್ತು. ರಾಜಕಾಲಯವೆಗೆ ಅಡ್ಡಲಾಗಿರುವ ರೈಲ್ವೆ ಸೇತುವೆ ಕಿರಿದಾಗಿರುವುದರಿಂದ ಸಮಸ್ಯೆಯಾಗುತ್ತಿದೆ. ಕಳೆದ ತಿಂಗಳು ಮುಖ್ಯಮಂತ್ರಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಹೋದರು. ಸಮಸ್ಯೆ ಮಾತ್ರ ಹಾಗೇ ಉಳಿದಿದೆ. ಜೀವನವೇ ಜಿಗುಪ್ಸೆಯಾಗಿದೆ' ಎಂದು ಜಾನ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.