ADVERTISEMENT

ಮಳೆಯಿಂದ ಸಾವು–ಸಹಿಸಲು ಸಾಧ್ಯವಿಲ್ಲ

ಮಳೆಗೆ ಮಹಿಳೆಯರಿಬ್ಬರ ಬಲಿ–ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ತರಾಟೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 19:58 IST
Last Updated 28 ಮೇ 2020, 19:58 IST
ಬೆಂಗಳೂರಿನ ಡಬಲ್ ರೋಡ್‌ ಮೇಲೆ ನಿಂತಿರುವ ಮಳೆ ನೀರು.
ಬೆಂಗಳೂರಿನ ಡಬಲ್ ರೋಡ್‌ ಮೇಲೆ ನಿಂತಿರುವ ಮಳೆ ನೀರು.   

ಬೆಂಗಳೂರು: ನಗರದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮಳೆಯಿಂದಾಗಿ ಮಹಿಳೆಯರಿಬ್ಬರು ಮೃತಪಟ್ಟ ಬಗ್ಗೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ‘ಮಳೆಯಿಂದ ಪ್ರಾಣಹಾನಿ ಸಂಭವಿಸುವುದನ್ನು ಇನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಬಿಬಿಎಂಪಿಗೆ ಇಲಾಖೆಯು ಸ್ಪಷ್ಟವಾಗಿ ತಿಳಿಸಿದೆ.

‘ಕೊಂಬೆ ಬಿದ್ದು ಯಾರಾದರೂ ಸತ್ತರೆ ಅದನ್ನು ಕೇವಲ ಆಕಸ್ಮಿಕ ಎನ್ನಲಾಗದು. ಸಕಾಲದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುತ್ತಿದ್ದರೆ ಎರಡು ಅಮೂಲ್ಯ ಜೀವಗಳು ಸಾಯುವುದನ್ನು ತಪ್ಪಿಸಬಹುದಿತ್ತು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರುಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರಿಗೆ ಬುಧವಾರ ಬರೆದ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಮಳೆ ಬಂದಾಗ ಸಂಭವಿಸುವ ಅವಘಡ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆ ಮೊದಲೇ ಸೂಚನೆ ನೀಡಿತ್ತು. ಮರಗಳ ರೆಂಬೆ ಕೊಂಬೆಗಳು ಬೀಳುವ ಸಂಭವವಿದ್ದರೆ ಅವುಗಳನ್ನು ಕತ್ತರಿಸುವಂತೆಯೂ ಸಲಹೆ ನೀಡಿದ್ದೆವು. ಇಷ್ಟಾಗಿಯೂ ಕ್ರಮ ಕೈಗೊಳ್ಳುವಲ್ಲಿ ಬಿಬಿಎಂಪಿ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಈ ಮಳೆ ಅವಘಡಗಳನ್ನು ತಪ್ಪಿಸುವ ಹೊಣೆ ಹೊತ್ತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಂತಹ ಅಧಿಕಾರಿಗಳು ನಿಯೋಜನೆ ಮೇರೆಗೆ ಬಿಬಿಎಂಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅವರನ್ನು ನಗರಾಭಿವೃದ್ಧಿ ಇಲಾಖೆ ಕಳುಹಿಸಿ. ಇಂತಹ ಕಠಿಣ ಕ್ರಮ ಕೈಗೊಂಡರೆ ಮಾತ್ರ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.