ADVERTISEMENT

ಕಸ ಗುಡಿಸುವ ಯಂತ್ರ ಖರೀದಿ ಟೆಂಡರ್‌ ರದ್ದು: ಬಿಬಿಎಂಪಿಗೆ ಮುಖಭಂಗ

ಗುತ್ತಿಗೆದಾರರು ನಮೂದಿಸಿದಕ್ಕಿಂತಲೂ ಹೆಚ್ಚು ಹಣ ಪಾವತಿಗೆ ನಿರ್ಣಯ ಕೈಗೊಂಡಿದ್ದ ಪಾಲಿಕೆ ಕೌನ್ಸಿಲ್‌ –ಅಕ್ರಮ ಬಯಲಿಗೆಳೆದಿದ್ದ ಪ್ರಜಾವಾಣಿ

​ಪ್ರಜಾವಾಣಿ ವಾರ್ತೆ
Published 18 ಮೇ 2020, 22:05 IST
Last Updated 18 ಮೇ 2020, 22:05 IST

ಬೆಂಗಳೂರು: ನಗರದ ಮುಖ್ಯರಸ್ತೆ ಹಾಗೂ ಉಪಮುಖ್ಯರಸ್ತೆಗಳನ್ನು ಸ್ವಚ್ಛಗೊಳಿಸಲು ಕಸ ಗುಡಿಸುವ ಯಂತ್ರ ಖರೀದಿಸಲು ಹಾಗೂ ಬಾಡಿಗೆಗೆ ಪಡೆಯಲು ಬಿಬಿಎಂಪಿ ಕರೆದಿದ್ದ ಟೆಂಡರ್‌ ಅನ್ನು ನಗರಾಭಿವೃದ್ಧಿ ಇಲಾಖೆ ರದ್ದುಪಡಿಸಿದೆ. ಯಂತ್ರಗಳ ಖರೀದಿಗೆ ಹೊಸತಾಗಿ ಟೆಂಡರ್‌ ಕರೆಯುವಂತೆ ಬಿಬಿಎಂಪಿಗೆ ಸೂಚನೆ ನೀಡಿದೆ.

ಮೇಯರ್‌ ಎಂ.ಗೌತಮ್ ಕುಮಾರ್‌ ಅಧ್ಯಕ್ಷತೆಯಲ್ಲಿ 2020ರ ಜ. 28ರಂದು ನಡೆದಿದ್ದ ಕೌನ್ಸಿಲ್‌ ಸಭೆಯಲ್ಲಿ ಬಿಬಿಎಂಪಿಯ ಎಂಟು ವಲಯಗಳಿಗೆ ಕಸ ಗುಡಿಸುವ ತಲಾ 17 ಯಂತ್ರಗಳನ್ನು ಖರೀದಿಸುವ ಹಾಗೂ 17 ಯಂತ್ರಗಳನ್ನು ಬಾಡಿಗೆಗೆ ಪಡೆಯುವ ಟೆಂಡರ್‌ಗೆ ಅನುಮೋದನೆ ನೀಡಲಾಗಿತ್ತು. ಈ ಯಂತ್ರ ಟೆಂಡರ್‌ನಲ್ಲಿ ಕನಿಷ್ಠ ಮೊತ್ತ ನಮೂದಿಸಿದ್ದ ಗುತ್ತಿಗೆದಾರರಿಗೆ ಅವರು ನಮೂದಿಸಿದಕ್ಕಿಂತ ಹೆಚ್ಚು ಮೊತ್ತ ಪಾವತಿ ಮಾಡಲು ಅವಕಾಶ ನೀಡಲಾಗಿತ್ತು. ಈ ಸಂದೇಹಾಸ್ಪದ ನಿರ್ಣಯದ ಕುರಿತು ‘ಪ್ರಜಾವಾಣಿ’ಯ 2020ರ ಜ 29ರ ಸಂಚಿಕೆಯಲ್ಲಿ ‘ಕಸ ಗುಡಿಸುವ ಯಂತ್ರ ಟೆಂಡರ್ ಅಕ್ರಮ?’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳನ್ನು ಸ್ವಚ್ಛಗೊಳಿಸುವುದಕ್ಕೆ ಪಾಲಿಕೆ ಅಲ್ಪಾವಧಿ ಟೆಂಡರ್‌ ಕರೆದು 2018ರ ಮಾರ್ಚ್‌ನಲ್ಲೇ ಗುತ್ತಿಗೆದಾರರನ್ನು ಅಂತಿಮಗೊಳಿಸಿತ್ತು. ಗುತ್ತಿಗೆ ಪಡೆದವರು ಕಸ ಗುಡಿಸುವ ಯಂತ್ರಗಳನ್ನು ಬಳಸಿ ಮೂರು ವರ್ಷಗಳು ಸೇವೆ ಒದಗಿಸಬೇಕು ಹಾಗೂ ಪ್ರತಿ ಯಂತ್ರವೂ ನಿತ್ಯ ಸರಾಸರಿ 40 ಕಿ.ಮೀ. ಉದ್ದದ ರಸ್ತೆಯನ್ನು ಗುಡಿಸಬೇಕು ಎಂಬ ಷರತ್ತು ಹಾಕಲಾಗಿತ್ತು. ಆದರೆ, ಆ ಟೆಂಡರ್‌ಗೆ ಕಾಂಗ್ರೆಸ್‌ –ಜೆಡಿಎಸ್‌ ಆಡಳಿತದ ಅವಧಿಯಲ್ಲಿ ಪಾಲಿಕೆ ಕೌನ್ಸಿಲ್‌ನ ಅನುಮೋದನೆ ನೀಡಿರಲಿಲ್ಲ. ಈ ಪ್ರಸ್ತಾವಕ್ಕೆ ಹಿಂದೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ, ಪಾಲಿಕೆ ಚುಕ್ಕಾಣಿ ಹಿಡಿದ ಬಳಿಕ ಸ್ವಚ್ಛಗೊಳಿಸಬೇಕಾದ ರಸ್ತೆಯ ಉದ್ದವನ್ನು ಪಾಲಿಕೆ ಕೌನ್ಸಿಲ್‌ 65 ಕಿ.ಮೀಗೆ ಹೆಚ್ಚಿಸಿದಂತೆ ಮಾಡಿ ಗುತ್ತಿಗೆದಾರರಿಗೆ ಹೆಚ್ಚು ಹಣ ನೀಡಲು ನಿರ್ಣಯಿಸಿತ್ತು. ಪ್ರತಿ ಕಿ.ಮೀ ರಸ್ತೆ ಸ್ವಚ್ಛಗೊಳಿಸಲು ಕನಿಷ್ಠ ದರ ನಮೂದಿಸಿದ (ಎಲ್‌1) ಗುತ್ತಿಗೆದಾರರಿಗೆ ಅವರು ಒಪ್ಪಿದ್ದಕ್ಕಿಂತ ಗರಿಷ್ಠ ₹ 177 ವರೆಗೂ ಹೆಚ್ಚುವರಿ ದರ ಸಿಗುತ್ತಿತ್ತು. ಎಲ್ಲ ವಲಯಗಳಿಗೂ ಸಾರಾಸಗಟಾಗಿ ಪ್ರತಿ ಕಿ.ಮೀ. ರಸ್ತೆ ಸ್ವಚ್ಛಗೊಳಿಸಲು ₹ 600 ನಿಗದಿಪಡಿಸಿತ್ತು.

ADVERTISEMENT

‘ಎಲ್‌ 1 ಗುತ್ತಿಗೆದಾರರಿಗೆ ಅವರು ನಮೂದಿಸಿದಕ್ಕಿಂತ ಹೆಚ್ಚು ದರ ನೀಡುವ ನಿರ್ಣಯಕ್ಕೆ ಪಾಲಿಕೆಯ ಕೆಲ ಅಧಿಕಾರಗಳೂ ಅಚ್ಚರಿ ವ್ಯಕ್ತಪಡಿಸಿದ್ದರು. ‘ಈ ವಿಚಾರದಲ್ಲಿ ನಮ್ಮನ್ನು ಕತ್ತಲಿನಲ್ಲಿ ಇಡಲಾಗಿದೆ. ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನ ಕೈಗೊಂಡ ಬಳಿಕವೇ ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ’ ಎಂದಿದ್ದರು.

ಆದರೆ, ಮೇಯರ್‌ ಗೌತಮ್‌ ಕುಮಾರ್‌, ಈ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದರು.

ಮುಖಭಂಗ ತಪ್ಪಿಸಬಹುದಿತ್ತು:

ಗುತ್ತಿಗೆದಾರರು ಅಗತ್ಯಕ್ಕಿಂತೆ ಹೆಚ್ಚು ಮೊತ್ತ ನಮೂದಿಸಿದ್ದರು ಎಂಬ ಕಾರಣಕ್ಕೆ ಕಾಂಗ್ರೆಸ್‌– ಜೆಡಿಎಸ್‌ ಆಡಳಿತಾವಧಿಯಲ್ಲಿ ಈ ಟೆಂಡರ್‌ಗೆ ಅನುಮೋದನೆ ನೀಡಿರಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಿ ಎಲ್‌1 ಗುತ್ತಿಗೆದಾರರು ನಮೂದಿಸಿದಕ್ಕಿಂತ ಹೆಚ್ಚು ಹಣ ನೀಡುವ ನಿರ್ಣಯ ಕೈಗೊಂಡಾಗಲೇ ಅವ್ಯವಹಾರದ ವಾಸನೆ ಬಡಿದಿತ್ತು. ಈಗ ನಗರಾಭಿವೃದ್ಧಿ ಇಲಾಖೆಯೇ ಇದು ಅಕ್ರಮ ಎಂದು ಟೆಂಡರ್‌ ರದ್ದುಪಡಿಸಿದೆ. ಕೌನ್ಸಿಲ್‌ನಲ್ಲೇ ಈ ಟೆಂಡರ್‌ ರದ್ದುಪಡಿಸಿದ್ದರೆ ಬಿಬಿಎಂಪಿಗೆ ಮುಖಭಂಗ ಆಗುವುದು ತಪ್ಪುತ್ತಿತ್ತು’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಹೇಳಿದರು.

–0

ಕಸ ಗುಡಿಸುವ ಯಂತ್ರ ಖರೀದಿ ಟೆಂಡರ್‌ ವಿವರ

ವಲಯ; ಗುತ್ತಿಗೆದಾರರು; ಟೆಂಡರ್‌ನಲ್ಲಿ ನಮೂದಿಸಿದ ಮೊತ್ತ ( 3 ವರ್ಷಗಳಿಗೆ ₹ ಕೋಟಿಗಳಲ್ಲಿ); ಪ್ರತಿ ಕಿ.ಮೀ.ಗೆ (₹ಗಳಲ್ಲಿ); ಬಿಬಿಎಂಪಿ ನೀಡುತ್ತಿರುವುದು (₹ ಕೋಟಿಗಳಲ್ಲಿ)

ಬೊಮ್ಮನಹಳ್ಳಿ; ಎಚ್‌.ಎನ್‌.ರೂಪೇಶ್ ಕುಮಾರ್‌; 3.59; 410; 5.26

ದಾಸರಹಳ್ಳಿ; ಎಸ್‌ಆರ್‌ಪಿ ಕ್ಲೀನ್‌ ಎನ್‌ವಿರೊ ಎಂಜಿನಿಯರ್ಸ್‌; 1.85;423; 2.63

ಪೂರ್ವ; ಸೋಮರೆಡ್ಡಿ ಮುನಿಶ್ಯಾಂ ರೆಡ್ಡಿ; 4.47; 510; 5.26

ಆರ್‌.ಆರ್.ನಗರ;ಎಸ್‌ಆರ್‌ಪಿ ಕ್ಲೀನ್‌ ಎನ್‌ವಿರೊ ಎಂಜಿನಿಯರ್ಸ್‌; 3.71;488; 5.26

ಮಹದೇವಪುರ; ಪಿ.ಆನಂದವರ್ಧನ್‌ ರೆಡ್ಡಿ; 3.71; 423.90; 5.26

ದಕ್ಷಿಣ; ಪಣತಿ ಗೋಪಿನಾಥ್‌ ರೆಡ್ಡಿ; 3.70; 422.50; 5.26

ಪಶ್ಚಿಮ; ಪಣತಿ ಗೋಪಿನಾಥ್‌ ರೆಡ್ಡಿ; 3.70; 422.50; 5.26

ಯಲಹಂಕ; ಪಿ.ಆನಂದವರ್ಧನ್‌ ರೆಡ್ಡಿ; 3.71;423.90; 5.26

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.