ADVERTISEMENT

‘ಉಡಾನ್‌’ಗೆ ಉಗ್ರಾಣ ಲೈಸೆನ್ಸ್‌: ಇಂದಿನಿಂದ ವರ್ತಕರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 19:39 IST
Last Updated 6 ಡಿಸೆಂಬರ್ 2018, 19:39 IST

ಬೆಂಗಳೂರು: ದಾಸನಪುರ ಸಮೀಪದ ಮಾಕಳಿಯಲ್ಲಿ ‘ಉಡಾನ್‌’ ಮತ್ತಿತರ ಕಂಪನಿಗಳಿಗೆ ಉಗ್ರಾಣ ಲೈಸೆನ್ಸ್‌ ನೀಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಕ್ರಮ ವಿರೋಧಿಸಿ, ಇಲ್ಲಿಯ ಯಶವಂತಪುರ ಮಾರುಕಟ್ಟೆ ಹಾಗೂ ಹೊಸ ತರಗುಪೇಟೆ ವರ್ತಕರು ನಾಳೆಯಿಂದ (ಶುಕ್ರವಾರ) ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.

ಉಡಾನ್‌ ಮತ್ತಿತರ ಕಂಪನಿಗಳಿಗೆ ಲೈಸೆನ್ಸ್‌ ನೀಡಿರುವುದರಿಂದ ಕಾನೂನುಬದ್ಧವಾಗಿ ವ್ಯಾಪಾರ ಮಾಡುತ್ತಿರುವ ಎಪಿಎಂಸಿ ವರ್ತಕರಿಗೆ ಅನ್ಯಾಯ ಆಗಲಿದೆ. ಅಲ್ಲದೆ, ಈ ಕಂಪನಿಗೆ ಟ್ರೇಡ್‌ ಲೈಸೆನ್ಸ್‌ ಅಥವಾ ಜಿಎಸ್‌ಟಿ ನೋಂದಣಿ ಇರುವುದಿಲ್ಲ. ಇದರಿಂದ ರಾಜ್ಯ ಹಾಗೂ ಕೇಂದ್ರದ ಬೊಕ್ಕಸಕ್ಕೆ ಯಾವುದೇ ಆದಾಯ ಬರುವುದಿಲ್ಲ ಎಂದು ವರ್ತಕರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಶವಂತಪುರ ಎ‍ಪಿಎಂಸಿ ವರ್ತಕರು ಬಾಡಿಗೆ ಹಾಗೂ ಸೆಸ್ ರೂಪದಲ್ಲಿ ₹ 100 ಕೋಟಿಯನ್ನು ಸರ್ಕಾರಕ್ಕೆ ಸಂದಾಯ ಮಾಡುತ್ತಿದ್ದು ಇದನ್ನು ಮಾರುಕಟ್ಟೆ ಮತ್ತು ರೈತರಿಗೆ ಉಪಯೋಗವಾಗುವ ಸೌಲಭ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಆದರೆ, ಈ ಕಂಪನಿಗಳು ನೇರವಾಗಿ ಉತ್ಪಾದಕರಿಂದ ಉತ್ಪನ್ನಗಳನ್ನು ಖರೀದಿಸಿ ಎಪಿಎಂಸಿ ಸೆಸ್‌ ತಪ್ಪಿಸುತ್ತಿದ್ದಾರೆ ಎಂದು ವರ್ತಕರು ದೂರಿದ್ದಾರೆ.

ADVERTISEMENT

ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಲೈಸೆನ್ಸ್‌ ರದ್ದು‍ಪಡಿಸದಿದ್ದರೆ ಇವು ರಾಜ್ಯದಾದ್ಯಂತ ತಮ್ಮ ಮಾರುಕಟ್ಟೆ ವಿಸ್ತರಿಸಿ ಎಪಿಎಂಸಿ ಮಾರುಕಟ್ಟೆ ವರ್ತಕರನ್ನು ಬೀದಿಪಾಲು ಮಾಡುವುದು ನಿಶ್ಚಿತ. ಸ್ಪರ್ಧಾತ್ಮಕ ದರ ಹಾಗೂ ಉಚಿತ ವಿತರಣೆ ಮೂಲಕ ಗ್ರಾಹಕರ ನೆಲೆ ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಕಂಪನಿಗಳು ಇದುವರೆಗೆ ₹ 250 ಕೋಟಿ ನಷ್ಟ ಮಾಡಿಕೊಂಡಿವೆ ಎಂದು‍ಪ್ರಕಟಣೆ ವಿವರಿಸಿದೆ.

ಗುರುವಾರ ಸೇರಿದ್ದ ಎಪಿಎಂಸಿ ವರ್ತಕರ ತುರ್ತು ಸಭೆಯಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸಲು ತೀರ್ಮಾನಿಸಲಾಯಿತು. ವರ್ತಕರ ಮುಷ್ಕರದಿಂದ ಈರುಳ್ಳಿ ಹಾಗೂ ಆಲೂಗಡ್ಡೆ ವ್ಯಾಪಾರಕ್ಕೆ ವಿನಾಯಿತಿ ನೀಡಲು ನಿರ್ಧರಿಸಲಾಯಿತು. ಸಭೆಯಲ್ಲಿ ಎಪಿಎಂಸಿ ವರ್ತಕರ ಸಂಘದ ಮುಖಂಡರಾದ ಆರ್‌.ಸಿ. ಲಹೋಟಿ, ಬಿ.ಎಲ್‌. ಶಂಕರಪ್ಪ ಹಾಗೂ ಡಿ.ಎ. ಪ್ರಸನ್ನ ಕುಮಾರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.