ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ನೇತೃತ್ವದ ನಿಯೋಗವು ಸೋಮವಾರದಿಂದ ಮೂರು ದಿನಗಳ ಕಾಲ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ಮೊದಲ ದಿನ ಮಾರ್ಟಿನ್ ಬೇಕರ್ ಸಹಿತ ಏಳು ಕಂಪನಿಗಳ ಜತೆ ಹೂಡಿಕೆ ಸಂಬಂಧ ಮಾತುಕತೆ ನಡೆಸಿದೆ.
ಮಾರ್ಟಿನ್ ಬೇಕರ್ ಕಂಪನಿಯ ಪರವಾಗಿ ಹಿರಿಯ ಉಪಾಧ್ಯಕ್ಷ ಆ್ಯಂಡ್ರೂ ಮಾರ್ಟಿನ್, ಸಿಎಫ್ಒ ರಾಬರ್ಟ್ ಮಾರ್ಗನ್, ವಾಣಿಜ್ಯ ವ್ಯವಹಾರಗಳ ಮುಖ್ಯಸ್ಥ ಬ್ರಿಯಾನ್ ಪೋವೆಲ್ ಭಾಗವಹಿಸಿದ್ದರು. ಇದಲ್ಲದೇ ಎಸ್.ಸಿ.ಐ ಸೆಮಿಕಂಡಕ್ಟರ್ಸ್, ಸ್ಯಾಮ್ಕೊ ಹೋಲ್ಡಿಂಗ್ಸ್, ಎ.ಆರ್.ಎಂ, ಲ್ಯಾಟೋಸ್ ಗ್ರೂಪ್, ವಿಯರ್ ಮತ್ತು ಎಡ್ವರ್ಡಿಯನ್ ಹೋಟೆಲ್ ಗ್ರೂಪ್ ಪ್ರಮುಖರನ್ನು ಭೇಟಿ ಮಾಡಿದರು ಎಂದು ಪ್ರಕಟಣೆ ತಿಳಿಸಿದೆ.
‘ವೈಮಾಂತರಿಕ್ಷ ಕ್ಷೇತ್ರದಲ್ಲಿ ಹೆಸರಾಗಿರುವ ಮಾರ್ಟಿನ್ ಬೇಕರ್ ಕಂಪನಿಯ ಪ್ರತಿನಿಧಿಗಳ ಜತೆಗಿನ ಮಾತುಕತೆ ಸಕಾರಾತ್ಮಕವಾಗಿತ್ತು. ರಾಜ್ಯದಲ್ಲಿ ಅವರ ತಯಾರಿಕಾ ಘಟಕ ಸ್ಥಾಪಿಸುವಂತೆ ಚರ್ಚಿಸಲಾಗಿದೆ. ಅವರು ತಮ್ಮ ಕಂಪನಿಯ ಪರಂಪರೆ, ಅದು ಜಾಗತಿಕ ಮಟ್ಟದಲ್ಲಿ ಹೊಂದಿರುವ ಸ್ಥಾನವನ್ನು ವಿವರಿಸಿದ್ದಾರೆ. ಕರ್ನಾಟಕದಲ್ಲಿನ ಕೈಗಾರಿಕಾ ವ್ಯವಸ್ಥೆ, ಮಾನವ ಸಂಪನ್ಮೂಲ ಮತ್ತು ಏರೋಸ್ಪೇಸ್ ಹಾಗೂ ರಕ್ಷಣಾ ವಲಯಗಳಿಗೆ ನೀಡಿರುವ ಮೂಲಸೌಕರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಪಾಟೀಲ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕವಾದ ಪರಿಸರ, ಮೂಲಸೌಕರ್ಯ, ಭೂಮಿಯ ಲಭ್ಯತೆ, ವಿಷನ್ ಗ್ರೂಪ್ ಚಿಂತನೆ, ಇನ್ವೆಸ್ಟ್ ಕರ್ನಾಟಕ ಫೋರಂನ ಉದ್ದೇಶ, ರಫ್ತುಕೇಂದ್ರಿತ ಕೈಗಾರಿಕಾ ನೀತಿ, ವಿನಾಯಿತಿ ಮತ್ತು ಉತ್ತೇಜನ ಕುರಿತು ಮಾಹಿತಿ ನೀಡಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.