ADVERTISEMENT

ಹಲಸೂರು ಕೆರೆ: 30 ಲೋಡ್‌ ಕಸ ತೆರವು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 7:01 IST
Last Updated 13 ಡಿಸೆಂಬರ್ 2020, 7:01 IST
ಹಲಸೂರು ಕೆರೆಯಿಂದ ಹೊರತೆಗೆದ ಕಸವನ್ನು ಎಂಇಜಿ ಯೋಧರು ದೋಣಿಯಿಂದ ಇಳಿಸಿದರು
ಹಲಸೂರು ಕೆರೆಯಿಂದ ಹೊರತೆಗೆದ ಕಸವನ್ನು ಎಂಇಜಿ ಯೋಧರು ದೋಣಿಯಿಂದ ಇಳಿಸಿದರು   

ಬೆಂಗಳೂರು: ಬಿಬಿಎಂಪಿ ಹಾಗೂ ಭಾರತೀಯ ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ (ಎಂಇಜಿ) ಸಹಯೋಗದಲ್ಲಿ ಹಲಸೂರು ಕೆರೆಯ ಸ್ವಚ್ಛತಾ ಅಭಿಯಾನ ಒಂದು ವಾರದಿಂದ ನಡೆಯುತ್ತಿದೆ. ಇದುವರೆಗೆ 30 ಲೋಡ್‌ಗಳಷ್ಟು ಕಸ ಹೊರ ತೆಗೆದು ವಿಲೇವಾರಿ ಮಾಡಲಾಗಿದೆ.

113 ಎಕರೆಗಳಷ್ಟು ವಿಸ್ತಾರವಾದ ಹಲಸೂರು ಕೆರೆಯಲ್ಲಿ ಬಿಬಿಎಂಪಿಯ ಕೆರೆಗಳ ನಿರ್ವಹಣೆ ಮಾಡುವ 50 ಸಿಬ್ಬಂದಿ ಹಾಗೂ ಎಂಇಜಿಯ 50 ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಶನಿವಾರ ಬಿಬಿಎಂಪಿಯ 80 ಸಿಬ್ಬಂದಿ ಹಾಗೂ ಎಂಇಜಿಯ 150 ಸಿಬ್ಬಂದಿ ಕೆರೆಯ ಕಸ ಹೊರತೆಗೆದರು. 5 ಬೋಟ್ ಗಳ ಮೂಲಕ ಕಳೆಯನ್ನು ದಡಕ್ಕೆ ತರಲಾಯಿತು. ಇದುವರೆಗೆ 30 ಲೋಡ್ ಕಸ ತೆರವು ಮಾಡಲಾಗಿದೆ.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಬೋಟ್‌ನಲ್ಲಿ ತೆರಳಿ ಕೆರೆ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದರು. ಸ್ವಚ್ಛತಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಹಲಸೂರು ಕೆರೆಯು ನಗರದ ಆಕರ್ಷಣೀಯ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕಿದೆ. ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲಕರವಾಗುವಂತೆ ಸೌಕರ್ಯ ಒದಗಿಸಲಾಗುತ್ತದೆ. ಬಿಬಿಎಂಪಿಯ ಮುಂದಿನ ವರ್ಷದ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಮೀಸಲಿಡಲಿದ್ದೇವೆ’ ಎಂದರು.

ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌, ಮೋಹನ್ ಕೃಷ್, ‘ಕೆರೆಗೆ ನೀರು ಹರಿದುಬರುವ ತೂಬಿನ ಬಳಿ 100 ಅಡಿ ಉದ್ದದ ಕಸದ ಬೇಲಿ (ತ್ರ್ಯಾಷ್‌ ಬ್ಯಾರಿಯರ್) ಅಳವಡಿಸಲಾಗಿದೆ. ತೇಲುವ ವಸ್ತುಗಳು ಅಲ್ಲೇ ಸಂಗ್ರಹವಾಗಲಿವೆ. ಅವುಗಳನ್ನು ಆಗಿಂದಾಗ್ಗೆ ತೆರವುಗೊಳಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.