
ಜಿಬಿಎ
ಬೆಂಗಳೂರು: ಪಿಜಿ ಉದ್ಯಮ ನಡೆಸುತ್ತಿರುವವರು ಉದ್ದಿಮೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದ್ದು, ಅನಧಿಕೃತ ಪೇಯಿಂಗ್ ಗೆಸ್ಟ್‌ಗಳಿಗೆ (ಪಿಜಿ) ಬೀಗ ಹಾಕಲಾಗುತ್ತದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಎಚ್ಚರಿಸಿದೆ.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೆ ಹಾಗೂ ಸ್ಥಾಪಿತ ಮಾನದಂಡಗಳನ್ನು ಉಲ್ಲಂಘಿಸಿ ಪಿಜಿ ವಹಿವಾಟು ಮಾಡುತ್ತಿರುವ ದೂರು ಬಂದಿದೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಭಿವೃದ್ಧಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ತಿಳಿಸಿದ್ದಾರೆ.
ಪಿಜಿಗಳಲ್ಲಿ ಸುರಕ್ಷತೆ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸದೇ ಇರುವುದು. ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸದೆ ಇರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ.
ಏಳು ದಿನಗಳ ಒಳಗೆ ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ) ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಇಲ್ಲದೆ ವಾಹಿವಾಟು ಮಾಡುತ್ತಿರುವ ಪಿಜಿ ಮಾಲೀಕರಿಗೆ ದಂಡ ವಿಧಿಸಿ ಉದ್ದಿಮೆಗೆ ಬೀಗ ಮುದ್ರೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಜಿಬಿಎ ಹಾಗೂ ಐದು ನಗರ ಪಾಲಿಕೆಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವ ಸಲುವಾಗಿ ಸರ್ಕಾರವು ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು ಬಹಿರಂಗ ಪತ್ರ ಬರೆದಿದ್ದಾರೆ.
‘ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ 10–12 ವರ್ಷಗಳಿಂದ ಭ್ರಷ್ಟಾಚಾರದ ಪ್ರಮಾಣ ಊಹೆಗೂ ನಿಲುಕದಷ್ಟು ಅಂಕೆ ಮೀರಿ ಬೆಳೆದು ನಿಂತಿದೆ. ಎಂಜಿನಿಯರಿಂಗ್, ಕಂದಾಯ, ನಗರ ಯೋಜನೆಗಳಲ್ಲಿ ಅತ್ಯಂತ ಹೆಚ್ಚು ಭ್ರಷ್ಟಾಚಾರವಿದೆ’ ಎಂದು ಅವರು ಹೇಳಿದ್ದಾರೆ.
ಈ ಭ್ರಷ್ಟಾಚಾರವನ್ನು ನಿಯಂತ್ರಿಸಲು ಎಂಟು ಸಲಹೆಗಳನ್ನು ಅವರು ನೀಡಿದ್ದಾರೆ.
‘ಆಡಳಿತದ ಕೆಳ ಹಂತದಿಂದ ಅಂತಿಮ ಹಂತದವರೆಗೆ ಸಂಪೂರ್ಣವಾಗಿ ‘ಕಾಗದ ರಹಿತ ಆಡಳಿತ’ ಜಾರಿ. ‘ವಿದ್ಯುನ್ಮಾನ ಪ್ರತಿಗಳ ಕಡತ’ (ಇ–ಫೈಲ್) ಕಡ್ಡಾಯವಾಗಬೇಕು. ಸಾರ್ವಜನಿಕರಾಗಲೀ ಅಥವಾ ಗುತ್ತಿಗೆದಾರರಾಗಲೀ ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಿ, ಕಡತಗಳನ್ನು ಮೂರು ದಿನದಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮವಾಗಬೇಕು. ಪ್ರತಿಯೊಂದು ಇಲಾಖೆಯ ಕೆಳ ಹಂತದ ಕಚೇರಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ, ಆರು ತಿಂಗಳ ದಾಖಲೆ ಹೊಂದುವಂತೆ ಮಾಡಬೇಕು’ ಎಂದಿದ್ದಾರೆ.
‘ಅಧಿಕಾರಿಗಳು, ನೌಕರರು ಗುತ್ತಿಗೆದಾರರನ್ನಾಗಲೀ ಅಥವಾ ಗ್ರಾಹಕರನ್ನಾಗಲೀ ಅವರವರ ಅಧಿಕೃತ ಕಚೇರಿಗಳನ್ನು ಹೊರತುಪಡಿಸಿ, ಖಾಸಗಿ ಸ್ಥಳಗಳಲ್ಲಿ ಭೇಟಿ ಮಾಡುವುದನ್ನು ನಿಷೇಧಿಸಬೇಕು. ಅಧಿಕಾರಿಯು ಬಳಸುವ ಸರ್ಕಾರಿ ಮತ್ತು ಸ್ವಂತ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು. ಅಧಿಕಾರಿ / ನೌಕರರು ನಿರ್ವಹಿಸಿರುವ ಕಾರ್ಯದ ಬಗ್ಗೆ ವಿಶೇಷ ತಂಡದಿಂದ ಪ್ರತಿ ತಿಂಗಳಿಗೊಮ್ಮ ಮಾಹಿತಿ ಪಡೆಯಬೇಕು. ಆಯುಕ್ತರು ಸೇರಿದಂತೆ ಎಲ್ಲ ಸಿಬ್ಬಂದಿಯೂ ಪ್ರತಿ ವರ್ಷ ಆಸ್ತಿ ಘೋಷಣೆ ಮಾಡಿ, ಲೋಕಾಯುಕ್ತ ಕಚೇರಿಗೆ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ನಿಯಮ ಜಾರಿ ಮಾಡಬೇಕು’ ಎಂದು ಎನ್.ಆರ್. ರಮೇಶ್ ಸಲಹೆ ನೀಡಿದ್ದಾರೆ.