ADVERTISEMENT

ಕೆರೆ ಕಥೆ ಹೇಳಲು ವಿಶ್ವಸಂಸ್ಥೆಗೆ ಚಿಣ್ಣರು

ಭಾರತವನ್ನು ಪ್ರತಿನಿಧಿಸಲಿರುವ ಅತಿ ಕಿರಿಯ ಕೆರೆ ಸಂರಕ್ಷಕರು

ಗುರು ಪಿ.ಎಸ್‌
Published 20 ಜನವರಿ 2020, 19:59 IST
Last Updated 20 ಜನವರಿ 2020, 19:59 IST
ಆನಂದ ಮಲ್ಲಿಗವಾಡ (ಮಧ್ಯದಲ್ಲಿರುವವರು) ಅವರೊಂದಿಗೆ ವಿದ್ಯಾರ್ಥಿಗಳು
ಆನಂದ ಮಲ್ಲಿಗವಾಡ (ಮಧ್ಯದಲ್ಲಿರುವವರು) ಅವರೊಂದಿಗೆ ವಿದ್ಯಾರ್ಥಿಗಳು   
""

ಬೆಂಗಳೂರು: ಹೂಳು ತುಂಬಿ ಹಾಳಾಗಿದ್ದ ಕೆರೆಯನ್ನು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಪುನರುಜ್ಜೀವನಗೊಳಿಸಿರುವ ಚಿಣ್ಣರು, ಆ ಕೆರೆಯ ಕಥೆಯನ್ನು ಹೇಳಲು ಅಮೆರಿಕಕ್ಕೆ ಹೊರಟಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮಾತನಾಡಲಿರುವ ಈ ಮಕ್ಕಳು, ಆ ಮೂಲಕ ಜಗತ್ತಿನ ಅತ್ಯುನ್ನತ ವೇದಿಕೆಯಲ್ಲಿ ಭಾರತದ ಪ್ರತಿನಿಧಿಗಳಾಗಿ ಮಾತನಾಡಲಿರುವ ಅತಿ ಕಿರಿಯ ‘ಕೆರೆ ಸಂರಕ್ಷಕರು’ ಎನಿಸಿಕೊಳ್ಳಲಿದ್ದಾರೆ.

ನಗರದ ವಿದ್ಯಾಶಿಲ್ಪ ಶಾಲೆಯ 8ನೆಯ ತರಗತಿಯ ವಿದ್ಯಾರ್ಥಿಗಳಾದಯಥಾರ್ಥ್‌ ಮೂರ್ತಿ, ಮೈತ್ರಿ ಪಟೇಲ, ಮಿಸ್ಟಿ ಕೇವಲ್‌ರಮಣಿ, ಇರಾ ಭೃಗುವಾರ್, ಅನ್ನಿಕಾ ಶಾ ಅವರು ಕೆರೆ ಪುನರುಜ್ಜೀವನ ಕಾರ್ಯ ಕೈಗೊಂಡವರು. ಕೆರೆ ಸಂರಕ್ಷಕ ಆನಂದ ಮಲ್ಲಿಗವಾಡ ನೇತೃತ್ವದಲ್ಲಿ ಮಕ್ಕಳು ಈ ಕಾರ್ಯ ಮಾಡಿದ್ದಾರೆ.

‘ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿಯಲ್ಲಿ ನಾಲ್ಕು ಕೆರೆಗಳನ್ನು ನಾನು ಪುನರುಜ್ಜೀವನಗೊಳಿಸಿದ್ದೇನೆ. ಈ ಕುರಿತು ಮಾಹಿತಿ ಪಡೆಯಲು ಯಥಾರ್ಥ್‌ ಮೂರ್ತಿ ಕೆರೆಯೊಂದಕ್ಕೆ ಭೇಟಿ ನೀಡಿದ. ನಂತರ, ಒಂದು ಕೆರೆ ಪುನರುಜ್ಜೀವನಗೊಳಿಸುವ ಗುರಿಯೊಂದಿಗೆ ಸ್ನೇಹಿತರೊಂದಿಗೆ ಬಂದ. ಆ ಗುರಿ ಈಗ ಈಡೇರಿದೆ’ ಎಂದು ಆನಂದ ಹೇಳುತ್ತಾರೆ.

ADVERTISEMENT

ಈ ಐವರು ಮಕ್ಕಳು ಕೇವಲ 25 ದಿನಗಳಲ್ಲಿ ಸಾರ್ವಜನಿಕರಿಂದ ₹8.27 ಲಕ್ಷ ದೇಣಿಗೆ ಸಂಗ್ರಹಿಸಿದ್ದಾರೆ. ಬನ್ನೇರುಘಟ್ಟ ಅರಣ್ಯಕ್ಕೆ ಹತ್ತಿರವಿರುವ ಶಾನುಭೋಗನಹಳ್ಳಿ ಕುಲುಮೆಪಾಳ್ಯ ಬಳಿಯ ಮಾನೆ ಕೆರೆಯನ್ನು ಇಷ್ಟೇ ಹಣದಲ್ಲಿ ಒಂದು ತಿಂಗಳಲ್ಲೇ ಪುನರುಜ್ಜೀವನಗೊಳಿಸಲಾಗಿದೆ.

‘ಕೆರೆ ಸಂರಕ್ಷಣೆ ಕುರಿತು ಆಸಕ್ತಿ ಇತ್ತು. ಅಂಕಗಳಿಗಾಗಿ ‘ಪ್ರಾಜೆಕ್ಟ್‌’ ಕೆಲಸ ಮಾಡುವುದಕ್ಕಿಂತ ನೈಜವಾಗಿ ಕೆರೆ ಅಭಿವೃದ್ಧಿ ಮಾಡಬೇಕೆನಿಸಿತು. ಇದಕ್ಕೆ ಸ್ನೇಹಿತೆಯರೂ ಕೈಜೋಡಿಸಿದರು. ಆನಂದ ಅವರ ಮಾರ್ಗದರ್ಶನದಲ್ಲಿ ಕೆರೆ ಅಭಿವೃದ್ಧಿ ಯೋಜನೆ ವಿನ್ಯಾಸಗೊಳಿಸಿದ್ದಲ್ಲದೆ, ಅದನ್ನು ಅನುಷ್ಠಾನಕ್ಕೂ ತಂದಿದ್ದೇವೆ. ಈ ಕುರಿತು ಜ.29ರಂದು ವಿಶ್ವಸಂಸ್ಥೆಯಲ್ಲಿ ವಿವರಣೆ ನೀಡಲಿದ್ದೇವೆ’ ಎಂದು ಯಥಾರ್ಥ್‌ ಮೂರ್ತಿ ಹೇಳಿದರು.

ಸ್ವಂತ ಹಣದಲ್ಲಿ ಪ್ರಯಾಣ:ನಾಲ್ವರು ವಿದ್ಯಾರ್ಥಿಗಳ ಪ್ರಯಾಣ ವೆಚ್ಚವನ್ನು ಅವರ ಪೋಷಕರೇ ಭರಿಸುತ್ತಿದ್ದಾರೆ. ಒಬ್ಬರಿಗೆ ₹2.5 ಲಕ್ಷ ಖರ್ಚಾಗುತ್ತದೆ. ಆರ್ಥಿಕವಾಗಿ ಅಷ್ಟೊಂದು ಸಬಲರಾಗಿಲ್ಲದ ಯಥಾರ್ಥ್‌, ಪ್ರಯಾಣ ವೆಚ್ಚವನ್ನೂ ಸಾರ್ವಜನಿಕರಿಂದ ಸಂಗ್ರಹಿಸುತ್ತಿದ್ದಾರೆ. ಆದರೆ, ‘ಈವರೆಗೆ ಯಾರೂ ಆರ್ಥಿಕ ನೆರವು ನೀಡಲು ಮುಂದೆ ಬಂದಿಲ್ಲ’ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಪುನರುಜ್ಜೀವನಗೊಳಿಸಿರುವ ಮಾನೆ ಕೆರೆಯ ನೋಟ

ಹೇಗಾಯ್ತು ಪುನರುಜ್ಜೀವನ?ಅರಣ್ಯದ ಬಳಿ ಇರುವ ಕಾರಣ ಈ ಮಾನೆ ಕೆರೆಯನ್ನು ‘ವನ್ಯಜೀವಿ ಸ್ನೇಹಿ’ ಕೆರೆಯನ್ನಾಗಿ ವಿನ್ಯಾಸಗೊಳಿಸಲಾಗಿದೆ. ಕೆರೆಯ ಸುತ್ತ ದೊಡ್ಡ ಏರಿ ಇದ್ದರೆ, ನೀರು ಕಡಿಮೆಯಾದಾಗ ಪ್ರಾಣಿಗಳಿಗೆ ಅದನ್ನು ಕುಡಿಯಲು ಕಷ್ಟವಾಗುತ್ತದೆ. ಹೀಗಾಗಿ, ಕೆರೆಯನ್ನು‘ತಟ್ಟೆ’ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಕೆರೆಯಲ್ಲಿ ಒಂದು ಅಡಿ ನೀರು ಇದ್ದಾಗಲೂ ಎಲ್ಲ ಪ್ರಾಣಿಗಳು ಸುಲಭವಾಗಿ ಕುಡಿಯಬಹುದು. ಅಲ್ಲದೆ, ನೀರಿನಲ್ಲಿಯೇ ಮಲಗಲು, ಆಟವಾಡಲೂ ಅವುಗಳಿಗೆ ಸಾಧ್ಯವಾಗುತ್ತದೆ.

ದೇಣಿಗೆ ಸಂಗ್ರಹವಾದ ನಂತರ, ಡಿ.5ರಿಂದ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ವಿದ್ಯಾರ್ಥಿಗಳು ಕೈಗೊಂಡಿದ್ದಾರೆ. 6ರಿಂದ 7 ಅಡಿಗಳಷ್ಟು ಹೂಳು ತೆಗೆಯಲಾಗಿದ್ದು, ಅದನ್ನು ಕೆರೆಯ ದಡದಲ್ಲಿಯೇ ಹಾಕಲಾಗಿದೆ. ಇದೇ ಮಣ್ಣಿನಲ್ಲಿ 12 ಸಾವಿರ ಹೂವು, ಹಣ್ಣು ಹಾಗೂ ಔಷಧಿ ಸಸ್ಯಗಳನ್ನು ನೆಡುವ ಉದ್ದೇಶ ಹೊಂದಿದ್ದಾರೆ.

‘ಕಾಂಕ್ರೀಟ್‌ ಅಥವಾ ಉಕ್ಕನ್ನು ಬಳಸದೆ, ಕೆರೆಯಲ್ಲಿ ಲಭ್ಯವಿರುವ ಗಟ್ಟಿ ಕಲ್ಲುಗಳನ್ನೇ ಬಳಸಿಕೊಂಡು ಗೋಡೆಯಂತೆ ಜೋಡಿಸಲಾಗಿದೆ. ಅಲ್ಲದೆ, ನೀರು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕೆರೆಯಲ್ಲಿ ನಾಲ್ಕು ಅಡಿಗಳಷ್ಟು ನೀರು ನಿಂತಿದೆ’ ಎಂದು ಆನಂದ ಹೇಳುತ್ತಾರೆ.

ಐದು ಗುರಿ ಸಾಧನೆ
ವಿಶ್ವಸಂಸ್ಥೆಯ ವಫುನಾ (ವಿಶ್ವಸಂಸ್ಥೆ ಸಂಸ್ಥೆಗಳು ಜಾಗತಿಕ ಒಕ್ಕೂಟ) ಎದುರು ಈ ಮಕ್ಕಳು ತಮ್ಮ ಯಶೋಗಾಥೆಯನ್ನು ಹೇಳಲಿದ್ದಾರೆ. ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ನಿಗದಿಪಡಿಸುವ 17 ಗುರಿಗಳ ಪೈಕಿ, ಐದು ಗುರಿಗಳನ್ನುಈ ವಿದ್ಯಾರ್ಥಿಗಳು ಸಾಧಿಸಿದ್ದಾರೆ.

ಶುದ್ಧ ನೀರು ಮತ್ತು ನೈರ್ಮಲೀಕರಣ, ಪರಿಸರ ಹಾನಿ ತಡೆಗೆ ಕ್ರಮ, ಜಲಚರಗಳ ರಕ್ಷಣೆ, ಭೂಮಿಯ ಮೇಲಿನ ಜೀವಿಗಳ ಒದಗಿಸಿರುವ ಅನುಕೂಲ ಮತ್ತು ಗುರಿ ಈಡೇರಿಕೆಗೆ ಮಾಡಿಕೊಂಡಿರುವ ಪಾಲುದಾರಿಕೆಯಂತಹ ಐದು ಗುರಿಗಳ ಬಗ್ಗೆ ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.