ADVERTISEMENT

ರೈತರಿಗೆ ತಂತ್ರಜ್ಞಾನ ತಲುಪಿಸಿ: ಎಸ್.ರಾಜೇಂದ್ರ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 19:45 IST
Last Updated 20 ಡಿಸೆಂಬರ್ 2021, 19:45 IST
ಕೃಷಿ ಪರಿಕರಗಳ ಮಾರಾಟಗಾರರಾದ ಯಶಸ್ವಿನಿ ಅವರಿಗೆ ಕುಲಪತಿ ಎಸ್.ರಾಜೇಂದ್ರ ಪ್ರಸಾದ್‌ ‘ದೇಸಿ’ ಕೋರ್ಸ್‌ನ ಪ್ರಮಾಣಪತ್ರ ಪ್ರದಾನ ಮಾಡಿದರು. ಎನ್.ದೇವಕುಮಾರ್, ಸಿಬ್ಬಂದಿ ತರಬೇತಿ ಘಟಕದ ಸಂಯೋಜಕ ಕೆ.ಶಿವರಾಮು, ಸಹಾಯಕ ಕೃಷಿ ನಿರ್ದೇಶಕರಾದ ಕೆ.ಎಂ.ನಾಗರಾಜ್, ಪ್ರಮೋದ್ ಕುಮಾರ್ ಇದ್ದಾರೆ
ಕೃಷಿ ಪರಿಕರಗಳ ಮಾರಾಟಗಾರರಾದ ಯಶಸ್ವಿನಿ ಅವರಿಗೆ ಕುಲಪತಿ ಎಸ್.ರಾಜೇಂದ್ರ ಪ್ರಸಾದ್‌ ‘ದೇಸಿ’ ಕೋರ್ಸ್‌ನ ಪ್ರಮಾಣಪತ್ರ ಪ್ರದಾನ ಮಾಡಿದರು. ಎನ್.ದೇವಕುಮಾರ್, ಸಿಬ್ಬಂದಿ ತರಬೇತಿ ಘಟಕದ ಸಂಯೋಜಕ ಕೆ.ಶಿವರಾಮು, ಸಹಾಯಕ ಕೃಷಿ ನಿರ್ದೇಶಕರಾದ ಕೆ.ಎಂ.ನಾಗರಾಜ್, ಪ್ರಮೋದ್ ಕುಮಾರ್ ಇದ್ದಾರೆ   

ಬೆಂಗಳೂರು: ‘ದೇಶದಲ್ಲಿ ಕೃಷಿಕರಿಗೆ ತಂತ್ರಜ್ಞಾನವನ್ನು ಸಕಾಲದಲ್ಲಿ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ.ಕೃಷಿ ಪರಿಕರಗಳ ಮಾರಾಟಗಾರರು ವ್ಯಾಪಾರದ ಜೊತೆಗೆ ತಾವು ಕಲಿ‌ತಿರುವ ತಾಂತ್ರಿಕ ಜ್ಞಾನವನ್ನು ರೈತರಿಗೆ ತಲುಪಿಸಬೇಕು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಎಸ್.ರಾಜೇಂದ್ರ ಪ್ರಸಾದ್ ಮನವಿ ಮಾಡಿದರು.

ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯ, ಕೃಷಿ ಇಲಾಖೆ ಸಹಯೋಗದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಸೋಮವಾರ ಹಮ್ಮಿಕೊಂಡಿದ್ದ ‘ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ’ (ದೇಸಿ) ಪ್ರಮಾಣಪತ್ರ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ಥಳೀಯ ಮಟ್ಟದಲ್ಲಿ ರೈತರಿಗೆ ಲಭ್ಯವಾಗುವ ಕೃಷಿ ಪರಿಕರ ಮಾರಾಟಗಾರರು ರೈತರು ಮತ್ತು ಕೃಷಿ ವಿಶ್ವವಿದ್ಯಾಲಯಗಳ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು. ‘ದೇಸಿ’ ಕೋರ್ಸ್‌ ಪೂರ್ಣಗೊಳಿಸಿರುವ ಮಾರಾಟಗಾರರು ‘ಕೃಷಿ ವೈದ್ಯ’ರಂತೆ ಕಾರ್ಯನಿರ್ವಹಿಸಬಹುದು’ ಎಂದರು.

ADVERTISEMENT

ವಿಶ್ವವಿದ್ಯಾಲಯದವಿಸ್ತರಣಾ ನಿರ್ದೇಶಕ ಎನ್.ದೇವ ಕುಮಾರ್, ‘ಮಾರಾಟಗಾರರು ಕೃಷಿ ಪರಿಕರಗಳನ್ನು ಮಧ್ಯವತಿಗಳ ಮೂಲಕ ಮಾರಾಟ ಮಾಡುವ ಬದಲು ನೇರವಾಗಿ ರೈತರನ್ನು ಸಂಪರ್ಕಿಸಬೇಕು. ಇದರಿಂದ ರೈತರು ಹಾಗೂ ಮಾರಾಟಗಾರರ ನಡುವೆ ಸಮನ್ವಯ ಹಾಗೂ ವಿಶ್ವಾಸ ಮೂಡುತ್ತದೆ. ವ್ಯಾಪಾರ ವೃದ್ಧಿಗೂ ಇದು ಸಹಕಾರಿ’ ಎಂದು ಹೇಳಿದರು.

‘ಅಂಗಡಿಗಳಲ್ಲಿ ಕೃಷಿಗೆ ಸಂಬಂಧಿಸಿದ ಪುಸ್ತಕಗಳು, ನಿಯತಕಾಲಿಕೆಗಳನ್ನು ಇಡುವುದರಿಂದ ರೈತರ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ. ಮಾರಾಟಗಾರರು ನಿಷೇಧಿತ ರಾಸಾಯನಿಕಗಳ ಮಾರಾಟ ನಿಲ್ಲಿಸಿ, ಪರಿಸರ ಸ್ನೇಹಿ ರಾಸಾಯನಿಕಗಳ ಮಾರಾಟಕ್ಕೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಒಂದು ವರ್ಷದದೇಸಿ‍ಕೋರ್ಸ್‌ ಆರಂಭಿಸಲಾಗಿತ್ತು. ಕೋರ್ಸ್‌ ಮುಗಿಸಿದ 36 ಮಂದಿಗೆ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.