ADVERTISEMENT

ಬೆಂಗಳೂರು | ಯುಪಿಐ ಕ್ಯೂಆರ್‌ ಕೋಡ್ ಅಪ್‌ಡೇಟ್‌ ವಂಚನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 14:00 IST
Last Updated 11 ಏಪ್ರಿಲ್ 2024, 14:00 IST
<div class="paragraphs"><p>ವಂಚನೆ (ಪ್ರಾತಿನಿಧಿಕ ಚಿತ್ರ)</p></div>

ವಂಚನೆ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಕ್ಯೂಆರ್‌ ಕೋಡ್ ಅಪ್‌ಡೇಟ್‌ ಹೆಸರಿನಲ್ಲಿ ನಗರದ ಹೋಟೆಲ್‌ವೊಂದರ ಮಾಲೀಕನಿಗೆ ವಂಚಿಸಲಾಗಿದ್ದು, ಈ ಬಗ್ಗೆ ಚಂದ್ರಾಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಕಲ್ಯಾಣನಗರದ ಹೋಟೆಲ್‌ವೊಂದರ ಮಾಲೀಕ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ದೂರುದಾರ ತನ್ನ ಹೋಟೆಲ್‌ ಬಿಲ್ ಪಾವತಿಗೆ ಯುಪಿಐ ಕ್ಯೂಆರ್‌ ಕೋಡ್ ಬಳಸುತ್ತಿದ್ದಾರೆ. ಏಪ್ರಿಲ್ 4ರಂದು ಹೋಟೆಲ್‌ಗೆ ಬಂದಿದ್ದ ಆರೋಪಿ, ಕಂಪನಿಯೊಂದರ ಪ್ರತಿನಿಧಿ ಎಂಬುದಾಗಿ ಹೇಳಿಕೊಂಡಿದ್ದ. ಯುಪಿಐ ಕ್ಯೂಆರ್‌ ಕೋಡ್ ಅವಧಿ ಮುಗಿದಿದ್ದು, ಅಪ್‌ಡೇಟ್‌ ಮಾಡಬೇಕೆಂದು ತಿಳಿಸಿದ್ದ. ಇದಕ್ಕಾಗಿ ಮೊಬೈಲ್ ನೀಡುವಂತೆ ಒತ್ತಾಯಿಸಿದ್ದ.’

‘ಆರೋಪಿ ಮಾತು ನಂಬಿದ್ದ ದೂರುದಾರ, ಮೊಬೈಲ್ ಕೊಟ್ಟಿದ್ದ. ಬಳಿಕ, ಆರೋಪಿ ಯುಪಿಐ ಮೂಲಕ ತನ್ನ ಖಾತೆಗೆ ₹ 1 ವರ್ಗಾಯಿಸಿಕೊಂಡಿದ್ದ. ಇದಾದ ನಂತರ, ಕ್ಯೂಆರ್ ಕೋಡ್ ಅಪ್‌ಡೇಟ್ ಆಗಿರುವುದಾಗಿ ಹೇಳಿ ಮೊಬೈಲ್ ವಾಪಸು ಕೊಟ್ಟು ಸ್ಥಳದಿಂದ ಹೊರಟು ಹೋಗಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೆಲ ನಿಮಿಷಗಳ ನಂತರ ದೂರುದಾರರ ಎರಡು ಬ್ಯಾಂಕ್‌ ಖಾತೆಗಳಲ್ಲಿದ್ದ ₹ 48 ಸಾವಿರ ಕಡಿತವಾಗಿದೆ. ಆರೋಪಿಯೇ ಯುಪಿಐ ಕ್ಯೂಆರ್‌ ಕೋಡ್ ಅಪ್‌ಡೇಟ್‌ ಹೆಸರಿನಲ್ಲಿ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆತ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.