ಬೆಂಗಳೂರು: ಜನವರಿ 30ರಂದು ನಿವೃತ್ತಿ ಆಗಲಿರುವ ಡಿಜಿ ಮತ್ತು ಐಜಿ ನೀಲಮಣಿ ಎಸ್. ರಾಜು ಅವರ ಉತ್ತರಾಧಿಕಾರಿ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಿದ್ದು, 30 ವರ್ಷ ಸೇವೆ ಪೂರೈಸಿರುವ ಅಧಿಕಾರಿಗಳ ಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಕಳುಹಿಸಲಾಗಿದೆ.
ಈ ಸಂಬಂಧ ಯುಪಿಎಸ್‌ಸಿ ಕೆಲವು ಮಾಹಿತಿ ಕೇಳಿತ್ತು. ಅದನ್ನೂ ಕಳುಹಿಸಲಾಗಿದೆ. ರಾಜ್ಯ ಸರ್ಕಾರದಿಂದ ಬಂದಿರುವ ಪಟ್ಟಿಯಲ್ಲಿ ಮೂವರ ಹೆಸರನ್ನು ಸೇವಾ ಹಿರಿತನ, ಕಾರ್ಯಕ್ಷಮತೆ ಮತ್ತಿತರ ಆಧಾರದಲ್ಲಿ ಯುಪಿಎಸ್‌ಸಿ ಸರ್ಕಾರಕ್ಕೆ ಕಳುಹಿಸಲಿದೆ. ಅವರಲ್ಲಿ ಒಬ್ಬರನ್ನು ಸರ್ಕಾರ ಆಯ್ಕೆ ಮಾಡಲಿದೆ ಎಂದು ಮೂಲಗಳು ಪ್ರಜಾವಾಣಿಗೆ ತಿಳಿಸಿವೆ.
ಇದಲ್ಲದೆ, 2020ರೊಳಗೆ ಐದು ಪೊಲೀಸ್ ಮಹಾನಿರ್ದೇಶಕರ ಹುದ್ದೆಗಳು ಖಾಲಿಯಾಗಲಿದ್ದು, ಈ ಹುದ್ದೆಗಳಿಗೆ ಅರ್ಹರಾದ ಆರು ಹಿರಿಯ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪದೋನ್ನತಿ ಸಮಿತಿ ಸಭೆ ನಡೆಯಿತು. ಡಿಜಿ ಮತ್ತು ಐಜಿ ನೀಲಮಣಿ ರಾಜು ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.