ADVERTISEMENT

ಬೆಂಗಳೂರು: 23 ಯುಪಿಎಸ್‌ಸಿ ಸಾಧಕರಿಗೆ ಸನ್ಮಾನ

ಬಲಹೀನರಿಗೆ ರಕ್ಷಣೆ ನೀಡಿ: ಮಹದೇವಪ್ಪ ಕರೆ

​ಪ್ರಜಾವಾಣಿ ವಾರ್ತೆ
Published 1 ಮೇ 2025, 16:17 IST
Last Updated 1 ಮೇ 2025, 16:17 IST
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಇಂಡಿಯಾ ಫಾರ್‌ ಐಎಎಸ್ ಅಕಾಡೆಮಿಯ 23  ಸಾಧಕರನ್ನು  ಸಚಿವ ಡಾ.ಎಚ್. ಸಿ. ಮಹದೇವಪ್ಪ ಗೌರವಿಸಿದರು. ಸಿ.ಎಸ್. ಕೇದಾರ್, ಜಿ. ಎನ್. ಶ್ರೀಕಂಠಯ್ಯ,  ಪಿ. ಸಿ. ಶ್ರೀನಿವಾಸ್, ಕೆ.ಎಂ. ನವೀನ್, ನಯನ್ ಗೌಡ, ಪ್ರಶಾಂತ್ ಶ್ರೀನಿವಾಸ್, ಬಾಬು ಸಂದೀಪ್ ಹಾಜರಿದ್ದರು.    ಪ್ರಜಾವಾಣಿ ಚಿತ್ರ
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಇಂಡಿಯಾ ಫಾರ್‌ ಐಎಎಸ್ ಅಕಾಡೆಮಿಯ 23  ಸಾಧಕರನ್ನು  ಸಚಿವ ಡಾ.ಎಚ್. ಸಿ. ಮಹದೇವಪ್ಪ ಗೌರವಿಸಿದರು. ಸಿ.ಎಸ್. ಕೇದಾರ್, ಜಿ. ಎನ್. ಶ್ರೀಕಂಠಯ್ಯ,  ಪಿ. ಸಿ. ಶ್ರೀನಿವಾಸ್, ಕೆ.ಎಂ. ನವೀನ್, ನಯನ್ ಗೌಡ, ಪ್ರಶಾಂತ್ ಶ್ರೀನಿವಾಸ್, ಬಾಬು ಸಂದೀಪ್ ಹಾಜರಿದ್ದರು.    ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಡಳಿತದ ನೀತಿ ನಿರೂಪಕರಾದ ಕಾರ್ಯಾಂಗದ ಸಾರಥಿಗಳು ಬಲಾಢ್ಯರಿಂದ ಬಲಹೀನರಿಗೆ ರಕ್ಷಣೆ ಮತ್ತು ಜೀವನ ಮಾರ್ಗೋಪಾಯಗಳನ್ನು ಒದಗಿಸುವ ಪ್ರಬಲ ಆಡಳಿತ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಯುಪಿಎಸ್‌ಸಿ ಮತ್ತು ಸಿಎಸ್‌ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ 23 ಸಾಧಕರನ್ನು ಅಭಿನಂದಿಸಿ, ಇಂಡಿಯಾ ಫಾರ್ ಐಎಎಸ್ ವೆಬ್‌ಸೈಟ್‌ ಬಿಡುಗಡೆ ಮಾಡಿ ಮಾತನಾಡಿದರು.

ಯೋಗ್ಯರು ಮತ್ತು ಸಮರ್ಥರ ಕೈಯಲ್ಲಿ ಆಡಳಿತ ಇದ್ದಾಗ, ನಿರ್ಣಯಗಳನ್ನು ಅನುಷ್ಠಾನಗೊಳಿಸುವಾಗ ಸಂವಿಧಾನದ ನಿರ್ದೇಶಕ ತತ್ವಗಳನ್ನು ಪರಿಪಾಲಿಸಬೇಕು. ಯಾರ ಮುಲಾಜಿಗೂ ಒಳಗಾಗಬಾರದು. ಅಧಿಕಾರಿಗಳು ಸಹನೆ, ಕರುಣೆ, ಅನುಕಂಪ, ಪ್ರೀತಿ, ಸ್ವಾತಂತ್ರ್ಯದ ಉದ್ದೇಶಗಳನ್ನು ಈಡೇರಿಸುವ ಜೊತೆಗೆ ಸಮರ್ಥ ಭಾರತವನ್ನು ನಿರ್ಮಿಸಬೇಕು ಎಂದು ಹೇಳಿದರು.

ADVERTISEMENT

ಬಿ.ಆರ್. ಅಂಬೇಡ್ಕರ್ 55 ಸಾವಿರ ಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಿ 140 ಕೋಟಿ ಜನರನ್ನು ರಕ್ಷಿಸುವ ಸಂವಿಧಾನ ರಚಿಸಿದ್ದಾರೆ. ಬುದ್ಧನ ಕಾಲದಿಂದಲೂ ಭಾರತ ಪ್ರಜಾಪ್ರಭುತ್ವ ದೇಶ. ರಾಜಕೀಯ ಸಮಾನತೆ ಸಿಕ್ಕಿದೆ. ಆದರೆ, ಸಮ ಸಮಾಜ, ಸಮಾನತೆ ಇಲ್ಲದೇ ಇದ್ದಲ್ಲಿ ರಾಜಕೀಯ ಸಮಾನತೆಗೆ ಅರ್ಥವಿರುವುದಿಲ್ಲ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಮತ್ತು ಇಂಡಿಯಾ ಫಾರ್ ಅಕಾಡೆಮಿಯ ಆಡಳಿತ ಮಂಡಳಿ ಅಧ್ಯಕ್ಷ ಸಿ. ಎಸ್. ಕೇದಾರ್ ಮಾತನಾಡಿ, ‘2024 ರ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕದ 41 ಅಭ್ಯರ್ಥಿಗಳು ಯಶಸ್ವಿಯಾಗಿದ್ದು, ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ ಬೇರೆ ಬೇರೆ ಹಂತಗಳಲ್ಲಿ ತರಬೇತಿ ಪಡೆದ 23 ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ’ ಎಂದರು.

ಅಕಾಡೆಮಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಿ. ಎನ್. ಶ್ರೀಕಂಠಯ್ಯ, ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಸಿ. ಶ್ರೀನಿವಾಸ್, ನಿರ್ದೇಶಕರಾದ ಕೆ. ನವೀನ್, ಕೆ.ಎಂ. ನಯನ್ ಗೌಡ, ಪ್ರಶಾಂತ್ ಶ್ರೀನಿವಾಸ್, ಬಾಬು ಸಂದೀಪ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.