ADVERTISEMENT

ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆ: ಬಿಬಿಎಂಪಿಗೆ ₹750 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 20:28 IST
Last Updated 18 ಮಾರ್ಚ್ 2025, 20:28 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ರಾಜ್ಯ ಸರ್ಕಾರ ‘ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ’ ಯೋಜನೆಯಡಿ 2024–25ನೇ ಸಾಲಿನ ನಾಲ್ಕನೇ ಹಾಗೂ ಕೊನೆ ಕಂತಿನ ₹750 ಕೋಟಿ ಅನುದಾನವನ್ನು ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಮಾರ್ಚ್‌ 18ರಂದು ಬಿಡುಗಡೆ ಮಾಡಿದೆ.

2024–25ನೇ ಸಾಲಿನಲ್ಲಿ ನಿಗದಿಪಡಿಸಲಾಗಿರುವ ₹3 ಸಾವಿರ ಕೋಟಿ ಅನುದಾನದಲ್ಲಿ, ಮೂರು ತ್ರೈಮಾಸಿಕದಲ್ಲಿ ತಲಾ ₹750 ಕೋಟಿ ಬಿಡುಗಡೆ ಮಾಡಲಾಗಿತ್ತು. ವಿಶೇಷ ಮೂಲಸೌಕರ್ಯ ಯೋಜನೆಯಡಿ ಬೃಹತ್‌ ರಸ್ತೆಗಳು, ಮೇಲ್ಸೇತುವೆ, ಕಾರಿಡಾರ್‌ ಮುಂತಾದ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳ ಬಾಬ್ತು ₹2,000 ಕೋಟಿಯಷ್ಟು ಬಿಲ್‌ ಪಾವತಿ ಬಾಕಿ ಉಳಿದಿದೆ. ಸಕಾಲದಲ್ಲಿ ಬಿಲ್‌ ಪಾವತಿಸದಿದ್ದಲ್ಲಿ ಕಾಮಗಾರಿಗಳ ಪ್ರಗತಿ ಕುಂಠಿತವಾಗುವ ಸಂಭವವಿರುತ್ತದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಹೀಗಾಗಿ, ಈ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

‘2024ರ ಫೆಬ್ರುವರಿ 28ರ ನಂತರದ ಬಿಲ್‌ಗಳ ಪಾವತಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚಿಸಿದ್ದಾರೆ’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಹೊಸ ಖಾತಾ

ಬೆಂಗಳೂರು: ಫ್ಲ್ಯಾಟ್‌ ಹಾಗೂ ವಾಣಿಜ್ಯ ಘಟಕಗಳಿಗೆ ಖಾತಾ ಹೊಂದಿರದ ಮಾಲೀಕರು ಆನ್‌ಲೈನ್‌ ಮೂಲಕ ಹೊಸದಾಗಿ ಇ–ಖಾತಾ ಪಡೆದುಕೊಳ್ಳ ಬಹುದು.

ಕಟ್ಟಡಗಳ ಅಭಿವೃದ್ದಿದಾರರು/ ಮಾಲೀಕರು, ಎಲ್ಲಾ ಬಹು ಫ್ಲ್ಯಾಟ್‌/ ವಾಣಿಜ್ಯ ಘಟಕಗಳಿಗೆ ಹೊಸ ಖಾತಾ ಪಡೆಯಬಹುದು. ಬಿಬಿಎಂಪಿಯ https://BBMP.karnataka.gov.in/NewKhata ಮೂಲಕ ಅರ್ಜಿ ಸಲ್ಲಿಸಬಹುದು.

ಮಾಲೀಕರ ಆಧಾರ್ ಸಂಖ್ಯೆ, ಎ- ಖಾತಾ ಬೇಕಾದಲ್ಲಿ ಕಟ್ಟಡದ ಅನುಮೋದಿತ ನಕ್ಷೆ ಮತ್ತು ಸ್ವಾಧೀನ ಪ್ರಮಾಣ ಪತ್ರ, ‘ಆಸ್ತಿಯ ಚಿತ್ರಗಳನ್ನು ಅಪ್‌ಲೋಡ್‌ ಮಾಡಬೇಕು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಶೋಷಿತರ ಸಂಘರ್ಷ ದಿನಾಚರಣೆ ನಾಳೆ

ಬೆಂಗಳೂರು: ಮಹಾಡ ಸತ್ಯಾಗ್ರಹದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಂಗಳೂರು ನಗರ ಜಿಲ್ಲಾ ಸಮಿತಿಯಿಂದ ಮಾ. 20ರಂದು ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಶೋಷಿತರ ಸಂಘರ್ಷ ದಿನಾಚರಣೆ ಹಮ್ಮಿಕೊಂಡಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಜಿಲ್ಲಾ ಸಮಿತಿ ಸಂಚಾಲಕ ಸಂಪಂಗಿರಾಮ, ‘ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ಬರಹಗಾರ ಸುಬ್ಬು ಹೊಲೆಯಾರ್, ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.