ಬೆಂಗಳೂರು: ಡಿಸೇಲ್ ಬಸ್‌ಗೆ ಬದಲಾಗಿ ಎಲೆಕ್ಟ್ರಿಕ್ ಬಸ್‌ಗಳು ಹೆಚ್ಚಾಗುತ್ತಿರುವುದರಿಂದ ವಾಯು ಮಾಲಿನ್ಯ ಕಡಿಮೆಯಾಗುತ್ತಿದೆ. ಭವಿಷ್ಯದಲ್ಲಿ ಹೈಡ್ರೊ, ಸೋಲಾರ್ ಬಸ್‌ಗಳು ಬಳಕೆಗೆ ಬಂದರೆ ಮಾಲಿನ್ಯ ನಿಯಂತ್ರಣವಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬಿಎಂಟಿಸಿಗೆ ಹೊಸದಾಗಿ 148 ನಾನ್–ಎಸಿ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ನಮ್ಮಲ್ಲಿರುವ 1,779 ಎಸಿ ಬಸ್‌ಗಳಿಂದ ದಿನಕ್ಕೆ ಸುಮಾರು 77 ಸಾವಿರ ಲೀಟರ್ ಡಿಸೇಲ್ ವ್ಯಯವಾಗುತ್ತದೆ. ಇದರಿಂದ ಎಷ್ಟು ವಾಯುಮಾಲಿನ್ಯ ಉಂಟಾಗುತ್ತದೆ ಎಂಬುದನ್ನು ಅಂದಾಜಿಬಹುದು. ಆದ್ದರಿಂದ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಜೊತೆಗೆ ಸಂಶೋಧನೆಯ ಅಂತಿಮ ಹಂತದಲ್ಲಿರುವ ಹೈಡ್ರೊ ಹಾಗೂ ಸೋಲಾರ್ ಬಸ್‌ಗಳನ್ನು ಬಳಸಬಹುದು’ ಎಂದರು.
‘ಬಿಎಂಟಿಸಿಯಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳನ್ನು ಟಾಟಾ ಸಂಸ್ಥೆ ನಿರ್ವಹಿಸುತ್ತಿದೆ. ಇದೀಗ ಮತ್ತೆ 148 ಬಸ್‌ಗಳು ಸೇರ್ಪಡೆಯಾಗಿವೆ. ಪ್ರತಿ ಕಿ.ಮೀ.ಗೆ ₹41 ನಿರ್ವಹಣಾ ವೆಚ್ಚವನ್ನು ಬಿಎಂಟಿಸಿ ನೀಡುತ್ತದೆ. ಕಂಡಕ್ಟರ್ ಮಾತ್ರ ನಮ್ಮವರು, ಉಳಿದ ಎಲ್ಲ ನಿರ್ವಹಣೆಯೂ ಅವರದೇ’ ಎಂದು ಮಾಹಿತಿ ನೀಡಿದರು.
ದೇಶದಲ್ಲೇ ಹೆಚ್ಚು: ‘ಕೇಂದ್ರ ಸರ್ಕಾರ ಬಿಎಂಟಿಸಿಗೆ 4,500 ಎಲೆಕ್ಟ್ರಿಕ್ ಬಸ್ ವಿತರಿಸಲು ಅನುಮೋದನೆ ನೀಡಿದೆ. ಆಗ ಒಟ್ಟಾರೆ 5,569 ಎಲೆಕ್ಟ್ರಿಕ್ ಬಸ್‌ಗಳಾಗುತ್ತವೆ. ದೆಹಲಿಯಲ್ಲಿ ಈಗ 2,200 ಎಲೆಕ್ಟ್ರಿಕ್ ಬಸ್ ಇದ್ದು, ಕೇಂದ್ರದ ಯೋಜನೆಯಲ್ಲಿ 2,500 ಸೇರಿಕೊಂಡರೂ ಬೆಂಗಳೂರು ದೇಶದಲ್ಲಿ ಅತಿಹೆಚ್ಚು ಎಲೆಕ್ಟ್ರಿಕ್ ಬಸ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗುತ್ತದೆ’ ಎಂದರು.
ದೇಗುಲ ದರ್ಶನ ವಿಸ್ತರಣೆ: ‘ನಗರದಲ್ಲಿ ಆರಂಭಿಸಿರುವ ‘ದೇಗುಲ ದರ್ಶನ’ ಬಿಎಂಟಿಸಿ ಬಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಹೀಗಾಗಿ, ಶುಕ್ರವಾರದಿಂದ ನಾಗೇಶ್ವರ ದೇವಾಲಯ, ಬೇಗೂರು, ಬೆಟ್ಟದಾಸನಪುರ, ಮದ್ದೂರಮ್ಮ, ಹುಸ್ಕೂರು, ನಾರಾಯಣ ದೇವಾಲಯಗಳ ದರ್ಶನ ಮಾಡಿಸುವ ಪ್ಯಾಕೇಜ್ ಆರಂಭಿಸಲಾಗಿದೆ. ಮೂರು ದಿಕ್ಕುಗಳಲ್ಲಿ ‘ದೇಗುಲ ದರ್ಶನ’ ಆರಂಭವಾಗಿದ್ದು, ಉಳಿದ ದಿಕ್ಕಿನಲ್ಲೂ ಶೀಘ್ರವೇ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.
‘ಬಿಡದಿ, ಆನೇಕಲ್, ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆಗೆ ಎಕ್ಸ್‌ಪ್ರೆಸ್ ಬಸ್‌ಗಳನ್ನು ಆರಂಭಿಸಲಾಗುತ್ತದೆ. ವೇಗದೂತ ಬಸ್‌ಗಳಿಂದ 20ರಿಂದ 30 ನಿಮಿಷ ಉಳಿತಾಯವಾಗುತ್ತದೆ. 120 ಬಸ್‌ಗಳು ವೇಗದೂತವಾಗಿ ಸಂಚರಿಸಲಿವೆ’ ಎಂದು ಮಾಹಿತಿ ನೀಡಿದರು.
ಸಾರಿಗೆ ಇಲಾಖೆಯ ಸಿಬ್ಬಂದಿಗೆ ನಾಲ್ಕೈದು ವರ್ಷದಿಂದ ಪ್ರತಿ ವರ್ಷವೂ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಡಿಮೆಯಾಗಿವೆರಾಮಲಿಂಗಾರೆಡ್ಡಿ ಸಾರಿಗೆ ಸಚಿವ
‘ಕೆಪಿಎಸ್ ಬಾಲಕರಿಗೆ ಉಚಿತ ಪ್ರಯಾಣ: ಸಲಹೆಯಷ್ಟೇ’
‘ಕರ್ನಾಟಕ ಪಬ್ಲಿಕ್ ಸ್ಕೂಲ್‌ನ (ಕೆಪಿಎಸ್) ಬಾಲಕರಿಗೆ ಉಚಿತವಾಗಿ ಪ್ರಯಾಣ ಸೌಲಭ್ಯ ಒದಗಿಸುವ ಸಂಬಂಧ ಯಾವುದೇ ನಿರ್ಧಾರವಾಗಿಲ್ಲ. ₹10 ಕೋಟಿಗಿಂತ ಹೆಚ್ಚಿನ ಪ್ರಸ್ತಾವವಿದ್ದರೆ ಹಣಕಾಸು ಇಲಾಖೆಯ ಸಮ್ಮತಿ ಪಡೆದು ಸಚಿವ ಸಂಪುಟದಲ್ಲಿ ತೀರ್ಮಾನವಾಗಬೇಕು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾಲಕರಿಗೂ ಉಚಿತ ಪ್ರಯಾಣ ಕಲ್ಪಿಸುವ ಸಲಹೆ ನೀಡಿದ್ದಾರೆ ಅಷ್ಟೇ’ ಎಂದು ಪ್ರಶ್ನೆಯೊಂದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರಿಸಿದರು.
ಗಾಳಿ ಆಂಜನೇಯ: ವರದಿಯಂತೆ ಸುಪರ್ದಿಗೆ
‘ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಣಕಾಸಿಗೆ ಸಂಬಂಧಪಟ್ಟಂತೆ ಯಾವುದೇ ದಾಖಲಾತಿಗಳು ಇಲ್ಲ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲಾಗಿದೆ. ಅದನ್ನು ಆಧರಿಸಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಲಾಗಿದೆ. ಐದು ವರ್ಷವಾದ ಮೇಲೆ ವಾಪಸ್ ಟ್ರಸ್ಟ್‌ಗೆ ಕೊಡುತ್ತೇವೆ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ‘ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಹೇಗೆ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದನ್ನು ಮಾಧ್ಯಮಗಳೇ ತೋರಿಸಿವೆ. ಹಣ ದುರುಪಯೋಗವಾದರೆ ಸುಮ್ಮನಿರಲು ಸಾಧ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.