ADVERTISEMENT

‘ಸಾರ್ವಜನಿಕ ಸಾರಿಗೆ ಬಳಕೆಯೇ ಸಂಚಾರ ದಟ್ಟಣೆ ನಿವಾರಣೆಗೆ ದಾರಿ’

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 19:34 IST
Last Updated 17 ಆಗಸ್ಟ್ 2022, 19:34 IST

ಬೆಂಗಳೂರು: ‘ನಗರದಲ್ಲಿ ಖಾಸಗಿ ವಾಹನಗಳು ಅಧಿಕವಾಗಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಸಾರಿಗೆಯನ್ನು ಜನರು ಹೆಚ್ಚು ಬಳಸಿದರೆ ಸಮಸ್ಯೆ ಸಾಕಷ್ಟು ನಿವಾರಣೆಯಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಐಎನ್‌ಎಚ್‌ಎಎಫ್‌– ಹ್ಯಾಬಿ ಟ್ಯಾಟ್‌ ಫೋರಂ ಆಯೋಜಿಸಿದ್ದ ‘21ನೇ ಶತಮಾನದಲ್ಲಿ ನಗರಗಳ ಅಭಿವೃದ್ಧಿ’ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರ ಜೊತೆಗೆ ಸಾಕಷ್ಟು ಮೂಲಸೌಕರ್ಯಗಳ ಕೊರತೆಯನ್ನೂ ಎದುರಿಸಲಾಗುತ್ತಿದೆ. ಯೋಜನಾತ್ಮಕವಾಗಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮುಂದಿನ 20 ವರ್ಷ ನಗರ ಬೆಳೆಯುತ್ತಲೇ ಹೋಗುತ್ತದೆ. ಮುಂದುವರಿದ ನಗರವನ್ನು ಅರೆ ನಗರವನ್ನಾಗಿ ರೂಪಿಸಬೇಕಾಗಿದೆ. ಸೌಲಭ್ಯ ಅಥವಾ ಸೇವೆಗಳನ್ನು ವಿಕೇಂದ್ರೀಕರಣ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಕಾರ್ಯಗತವಾಗಿದೆ’ ಎಂದರು.

ADVERTISEMENT

‘ನಗರದಲ್ಲಿ ಘನತ್ಯಾಜ್ಯ ಹಾಗೂ ದ್ರವತ್ಯಾಜ್ಯದ ಸಮಸ್ಯೆ ಬಗ್ಗೆ ಸಾಕಷ್ಟು ಜನರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನಾವು ನಿಯಂತ್ರಿಸಲು ಸಾಕಷ್ಟು ವಿಕೇಂದ್ರೀಕೃತ ಸೌಲಭ್ಯಗಳನ್ನು ಸ್ಥಾಪಿಸುತ್ತಿದ್ದೇವೆ. ವಾರ್ಡ್‌ವಾರು ತ್ಯಾಜ್ಯ ಸಂಸ್ಕರಣೆ ಇದರಲ್ಲಿ ಒಂದಾಗಿದೆ’ ಎಂದು ಹೇಳಿದರು.

‘ನಗರಗಳ ಬೆಳವಣಿಗೆಯಲ್ಲಿ ‘ಮಾಸ್ಟರ್‌ ಪ್ಲಾನ್‌’ ರೂಪಿಸುವಲ್ಲಿ ಸ್ಥಳೀಯ ಆಡಳಿತಗಳು ವಿಫಲವಾಗಿವೆ. ಯೋಜನೆಯಂತೆ ಅಭಿವೃದ್ಧಿಯಾಗದಿರುವುದು ಸಮಸ್ಯೆಗಳು ಹೆಚ್ಚಾಗಲು ಕಾರಣ’ ಎಂದು ಸಿಎನ್‌ಟಿ ಆರ್ಕಿಟೆಕ್ಟ್ಸ್‌ನ ವ್ಯವಸ್ಥಾಪಕ ಪಾಲುದಾರ ಪ್ರೇಮ್‌ ಚಂದಾವರ್ಕರ್‌ ಹೇಳಿದರು.

‘ವಸತಿಗಾಗಿ ನೈಸರ್ಗಿಕ ಪ್ರದೇಶಗಳಾದ ಕೆರೆಯಂತಹ ಸ್ಥಳಗಳನ್ನು ಉಪಯೋಗಿಸಿಕೊಳ್ಳುವ ಸಂದರ್ಭ ಬಾರದಂತೆ ಯೋಜನೆ ರೂಪಿಸುವುದು ನಗರಗಳಲ್ಲಿ ಅತ್ಯಗತ್ಯವಾಗಿದೆ’ ಎಂದು ಅಮೆರಿಕದವಾಸ್ತುಶಿಲ್ಪಿ ಕ್ಯಾತೆ ದೊರ್ಗಾನ್‌ ಅಭಿಪ್ರಾಯಪಟ್ಟರು.

ನಗರದ ಸುಬ್ರಹ್ಮಣ್ಯಪುರ ವರ್ಷ ಕಳೆದಂತೆ ಹೇಗೆ ಬದಲಾಯಿತು, ಅಲ್ಲಿನ ಕೆರೆಯ ಪ್ರದೇಶದಲ್ಲಿ ಬಂದು ವಾಸ ಮಾಡುವವರನ್ನು ತೆರವುಗೊಳಿಸುವುದು ಎಷ್ಟು ಕಷ್ಟವಾಗುತ್ತಿದೆ, ಇದಕ್ಕಾಗಿ ನ್ಯಾಯಾಲಯದಲ್ಲಿನ ಹೋರಾಟ ಹೇಗೆ ನಡೆಯುತ್ತಿದೆ ಎಂಬುದನ್ನು ವಕೀಲ ಲಿಯೊ ಸಲ್ಡಾನಾ ವಿವರಿಸಿದರು.

‘ರಾಜಕಾಲುವೆ ನಿರ್ವಹಣೆ ಯೋಜನೆಯಲ್ಲಿ ಸಾಕಷ್ಟು ಕೊರತೆ ಇದೆ. ಇವುಗಳ ನಿರ್ವಹಣೆಯಿಂದ ಮಳೆಗಾಲದಲ್ಲಿ ಸಮಸ್ಯೆಗಳೇ ಹೆಚ್ಚಾಗುತ್ತಿವೆ’ ಎಂದು ವಿಎ ಗ್ರೂಪ್‌ನ ಪ್ರಧಾನ ಆರ್ಕಿಟೆಕ್ಟ್‌ ನರೇಶ್‌ ನರಸಿಂಹನ್‌ ಹೇಳಿದರು.

ಇಎಸ್‌ಜಿ ಟ್ರಸ್ಟಿ ಭಾರ್ಗವಿ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.