
ಬೆಂಗಳೂರು: ದಲಿತ ಎಂದರೆ ತಂದೆ ಇಲ್ಲದೇ ಹುಟ್ಟಿರುವ ಮಕ್ಕಳು ಎಂಬರ್ಥವಿದೆ. ಕೆಟ್ಟ ಅರ್ಥ ಇರುವ ಈ ಪದ ಬಳಕೆ ಸರಿಯಲ್ಲ. ದಮನಿತ ಪದ ಬಳಸಬಹುದು ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಸಲಹೆ ನೀಡಿದ್ದಾರೆ.
ಕರ್ನಾಟಕ ಅಹಿಂದ ಹೋರಾಟ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಸುಬುಗಳಿಂದ ಹಲವು ಸಮುದಾಯಗಳಿಗೆ ಹೆಸರು ಬಂದಿದೆ. ಕ್ಷೌರ ಮಾಡುವರನ್ನು ಕ್ಷೌರಿಕರು, ಕುಂಬಾರಿಕೆ ಮಾಡುವವರನ್ನು ಕುಂಬಾರರು ಎಂದು ಕರೆಯಲಾಗುತ್ತದೆ. ಆದರೆ, ದಲಿತ ಎನ್ನುವ ಪದ ಕುಲದ ಕಸುಬು ಆಗಿಲ್ಲ. ದಲಿತ, ದಲಿತರ ಕೇರಿ, ದಲಿತರ ಓಣಿ, ದಲಿತ ಮಂತ್ರಿ ಈ ರೀತಿಯ ಹೆಸರುಗಳಲ್ಲಿ ಕರೆಯುವುದು ಹೀನಾಯ ಎಂದರು.
‘ಯುವಜನಾಂಗ, ವಿದ್ಯಾವಂತರು ಅಸ್ಪೃಶ್ಯತೆಯಿಂದ ಹೊರ ಬರುವ ಕೆಲಸ ಮಾಡಬೇಕೆ ಹೊರತು, ಮತ್ತೆ ಅದರೊಳಗೆ ಸೇರಿಕೊಳ್ಳುವ ರೀತಿಯಲ್ಲಿ ನಡೆದುಕೊಳ್ಳಬಾರದು. ದೇವಸ್ಥಾನ ಕಟ್ಟಿಸುವುದು, ಪೂಜೆ ಮಾಡಿಸುವುದು ಎಲ್ಲವೂ ನಮ್ಮ ಸಂಸ್ಕೃತಿಯನ್ನು ಮರೆತು ಬ್ರಾಹ್ಮಣೀಕರಕ್ಕೆ ಒಳಗಾಗುವುದೇ ಆಗಿದೆ. ಬ್ರಾಹ್ಮಣ್ಯವು ಬಹುತೇಕ ಮಾನವ ವಿರೋಧಿ, ಪರಿಸರ ವಿರೋಧಿಯಾಗಿರುತ್ತದೆ. ಅದನ್ನು ಒಪ್ಪಿಕೊಂಡು ನಮ್ಮ ಜನರಿಗೆ ಮೋಸ ಮಾಡಬಾರದು. ಸಮುದಾಯಗಳು ಒಗ್ಗಟ್ಟಿನಿಂದ ಇರಬೇಕು’ ಎಂದರು.
‘ಕೋರೆಗಾಂವ್ ರೀತಿಯ ರಕ್ತಪಾತ ಯುದ್ಧಗಳು ಈಗ ಬೇಕಾಗಿಲ್ಲ. ದೇಶದಲ್ಲಿ ಬೇರೂರಿರುವ ಮೌಢ್ಯ, ಅಸ್ಪೃಶ್ಯತೆಯ ವಿರುದ್ಧದ ಯುದ್ಧಗಳು ಬೇಕಾಗಿವೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಹಿಂದ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಂ. ಮುತ್ತುರಾಜು, ಸಮತಾ ಸೈನಿಕ ದಳ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ನಿವೃತ್ತ ಅಧಿಕಾರಿ ಭೀಮಾ ಶಂಕರ್, ಪತ್ರಕರ್ತ ಜಿ. ಆಂಜಿನಪ್ಪ, ಹೋರಾಟಗಾರ ಎಚ್. ಪ್ರದೀಪ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.