ADVERTISEMENT

ಕೃಷಿ ವಿ.ವಿದ್ಯಾಲಯಕ್ಕೂ ಯುವಿಸಿ ಮಾದರಿಯ ಆಡಳಿತ ಮಂಡಳಿ: ಸಿ.ಎನ್. ಅಶ್ವತ್ಥನಾರಾಯಣ

ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 18:15 IST
Last Updated 27 ಫೆಬ್ರುವರಿ 2021, 18:15 IST
ಕಾರ್ಯಕ್ರಮದಲ್ಲಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಲಾಯಿತು. ಡಾ.ಎಸ್.ರಾಜೇಂದ್ರ ಪ್ರಸಾದ್‌, ಡಾ.ಕೆ.ನಾರಾಯಣ ಗೌಡ ಇತರರು ಇದ್ದರು
ಕಾರ್ಯಕ್ರಮದಲ್ಲಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಲಾಯಿತು. ಡಾ.ಎಸ್.ರಾಜೇಂದ್ರ ಪ್ರಸಾದ್‌, ಡಾ.ಕೆ.ನಾರಾಯಣ ಗೌಡ ಇತರರು ಇದ್ದರು   

ಬೆಂಗಳೂರು: ‘ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು (ಯುವಿಸಿ) ಮಾದರಿಯಲ್ಲಿಯೇ ಕೃಷಿ ವಿಶ್ವವಿದ್ಯಾಲಯದ ಆಡಳಿತ, ಶೈಕ್ಷಣಿಕ, ಆರ್ಥಿಕ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯುವಿಸಿಗೆ ಆರ್ಥಿಕ, ಆಡಳಿತ ಮತ್ತು ಶೈಕ್ಷಣಿಕವಾಗಿ ಸ್ವಾಯತ್ತತೆ ನೀಡುವ ಮೂಲಕ ಅದನ್ನು ಜಾಗತಿಕ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿಯೂ ‘ಬೋರ್ಡ್‌ ಆಫ್‌ ಗವರ್ನನ್ಸ್‌’ ವ್ಯವಸ್ಥೆಯೇ ಬರಲಿದೆ’ ಎಂದರು.

‘ವಿಶ್ವವಿದ್ಯಾಲಯಗಳಿಗೆ ರಾಜಕೀಯ ನೇಮಕಾತಿ ಮಾಡುವುದು, ಶಿಷ್ಯಂದಿರನ್ನು ತಂದು ಕೂರಿಸುವುದು, ಸ್ವಹಿತಾಸಕ್ತಿಗಳು ಮುಂತಾದವುಗಳಿಂದ ಹೊರಬರಲೇಬೇಕಿದೆ. ಅರ್ಹರು ಯಾರಿದ್ದಾರೋ ಅವರಷ್ಟೇ ಇಲ್ಲಿನ ಉನ್ನತ ಸ್ಥಾನಗಳಲ್ಲಿ ಇರಬೇಕು. ಇದೇ ಮಾರ್ಗಸೂಚಿಯನ್ನು ಪ್ರತೀ ಕಾಲೇಜಿಗೂ ಅನ್ವಯ ಮಾಡುತ್ತಿದ್ದೇವೆ’ ಎಂದರು.

ADVERTISEMENT

‘ಸದ್ಯ ಒಂದು ಎಂಜಿನಿಯರಿಂಗ್‌ ಕಾಲೇಜು ನಡೆಸಲು ವರ್ಷಕ್ಕೆ ₹30 ಕೋಟಿ, ಒಂದು ಐಐಟಿಗೆ ₹1,200 ಕೋಟಿ ಖರ್ಚು ಮಾಡಲಾಗುತ್ತಿದೆ. ಯುವಿಸಿ ಅಭಿವೃದ್ಧಿಗೆ ವಾರ್ಷಿಕ ₹150 ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ’ ಎಂದರು.

ಲೈಸೆನ್ಸ್‌ ರಾಜ್‌ ವ್ಯವಸ್ಥೆ ನಿರ್ಮೂಲನೆ

‘ರಾಜ್ಯ ಕೃಷಿ ವ್ಯವಸ್ಥೆಯಲ್ಲಿ ತುಂಬಿಹೋಗಿದ್ದ ಲೈಸೆನ್ಸ್‌ ರಾಜ್‌ ವ್ಯವಸ್ಥೆಯ ನಿರ್ಮೂಲನೆ ಮಾಡಲು ಹಾಗೂ ಕೃಷಿಯಲ್ಲಿ ನವೋದ್ಯಮ, ಆವಿಷ್ಕಾರಗಳಿಗೆ ಒತ್ತು ನೀಡಲು ಸರ್ಕಾರ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ’ ಎಂದರು.

‘ಮೊದಲು ರೈತರು ಎಪಿಎಂಪಿಯಲ್ಲಿ ನಡೆಸುತ್ತಿದ್ದ ಒಟ್ಟು ವಹಿವಾಟಿನ ಮೇಲೆ ಶೇ 1.5ರಷ್ಟು ಸೆಸ್‌ ಹಾಕಲಾಗುತ್ತಿತ್ತು. ಅದನ್ನೀಗ ಕೇವಲ 60 ಪೈಸೆಗೆ ಇಳಿಸಿದ್ದೇವೆ. ಹಾಗೆ ನೋಡಿದರೆ ಸರ್ಕಾರದ ಆದಾಯನ್ನೇ ಕಡಿಮೆ ಮಾಡಿಕೊಂಡು ರೈತರು ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್‌, ಡೀನ್‌ ಡಾ.ಡಿ.ಎಲ್.ಸಾವಿತ್ರಮ್ಮ, ಹಳೆಯ ವಿದಾರ್ಥಿಗಳ ಸಂಘದ ಅಧ್ಯಕ್ಷ ಡಾ.ಕೆ.ನಾರಾಯಣ ಗೌಡ, ಕಾರ್ಯದರ್ಶಿ ಡಾ. ಹರಿಣಿಕುಮಾರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.