ADVERTISEMENT

ಯುವಿಸಿಇ ವ್ಯಾಪ್ತಿ ವಿವಾದ: ಶೀಘ್ರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:32 IST
Last Updated 5 ಜೂನ್ 2019, 19:32 IST
ಯುವಿಸಿಇ
ಯುವಿಸಿಇ   

ಬೆಂಗಳೂರು: ನಗರದ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜ್‌ (ಯುವಿಸಿಇ) ಯಾರಿಗೆ ಸೇರಿದ್ದು ಎಂಬ ವಿಷಯದಲ್ಲಿ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳುವ ಲಕ್ಷಣ ಇದೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್‌ ನೇತೃತ್ವದ ತಜ್ಞರ ಸಮಿತಿ ಒಂದರೆಡು ದಿನಗಳಲ್ಲಿ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ. ಸಮಿತಿಯ ಎರಡನೇ ಹಾಗೂ ಕೊನೆಯ ಸಭೆ ಮಂಗಳವಾರ ಇಲ್ಲಿ ನಡೆದಿತ್ತು. ಬೆಂಗಳೂರು ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಗಳು, ವಿಟಿಯು ಕುಲಪತಿಗಳು ಹಾಗೂ ಕಾಲೇಜಿನ ಪ್ರಾಚಾರ್ಯರು ಸಭೆಯಲ್ಲಿದ್ದರು.

ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಗಳು ತಮ್ಮಲ್ಲಿನ ವಿವರವಾದ ಯೋಜನೆಗಳನ್ನು ಸಮಿತಿಯ ಮುಂದಿಟ್ಟವು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಯುವಿಸಿಇ ಯುನಿಟರಿ ವಿಶ್ವವಿದ್ಯಾಲಯವಾಗಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಪ್ರತಿಪಾದಿಸಿದರೆ, ಯುವಿಸಿಇ ಅನ್ನು ವಿಭಜಿಸಿ ಎರಡು ಎಂಜಿನಿಯರಿಂಗ್‌ ಕಾಲೇಜುಗಳನ್ನಾಗಿ ಮಾಡಬೇಕು ಎಂಬುದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವಾದವಾಗಿತ್ತು. ಈ ಎರಡೂ ಯೋಜನೆಗಳನ್ನು ವಿರೋಧಿಸಿದ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು, ಯಾವುದೇ ಹೊಸ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ವಿಟಿಯು ಅವಕಾಶ ಕೊಡುವುದಿಲ್ಲ ಎಂದರು. ವಿಟಿಯುಗೆ ಕಾಲೇಜನ್ನು ಹಸ್ತಾಂತರಿಸಿದರೂ ಕಾಯ್ದೆಯನ್ನು ಬದಲಿಸಲೇಬೇಕು ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.