ADVERTISEMENT

ಪೆಡಂಭೂತವಾಗಿ ಕಾಡುತ್ತಿದೆ ಗುತ್ತಿಗೆ ಕಾರ್ಮಿಕರ ಪದ್ಧತಿ

ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಳವಳ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 19:50 IST
Last Updated 13 ಜುಲೈ 2019, 19:50 IST
ಕಾರ್ಯಕ್ರಮದಲ್ಲಿ (ಎಡದಿಂದ) ಪ್ರೊ.ಬಾಬು ಮ್ಯಾಥ್ಯೂ, ಹಿರಿಯ ವಕೀಲ ಕೆ.ಸುಬ್ಬರಾವ್‌, ವಿ.ಗೋಪಾಲ ಗೌಡ, ವಕೀಲ ಮುರಳೀಧರ ಅವರು ಮಾತುಕತೆಯಲ್ಲಿ ತೊಡಗಿದ್ದರು  –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ಪ್ರೊ.ಬಾಬು ಮ್ಯಾಥ್ಯೂ, ಹಿರಿಯ ವಕೀಲ ಕೆ.ಸುಬ್ಬರಾವ್‌, ವಿ.ಗೋಪಾಲ ಗೌಡ, ವಕೀಲ ಮುರಳೀಧರ ಅವರು ಮಾತುಕತೆಯಲ್ಲಿ ತೊಡಗಿದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಗುತ್ತಿಗೆ ಕಾರ್ಮಿಕ ಪದ್ಧತಿಯು ಪೆಡಂಭೂತವಾಗಿ ದೇಶವನ್ನು ಕಾಡುತ್ತಿದೆ’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಲೇಬರ್‌ ರೆಪ್ರೆಸೆಂಟೇಟಿವ್ಸ್‌ ಫೋರಂ ಫಾರ್‌ ರಿಸರ್ಚ್‌ ಆ್ಯಂಡ್‌ ಆ್ಯಕ್ಷನ್‌ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಕೇಂದ್ರ ಸರ್ಕಾರದ ಇತ್ತೀಚಿನ ನೀತಿಗಳಿಂದ ಕಾರ್ಮಿಕ ವರ್ಗದ ಮೇಲೆ ಆಗಿರುವ ಪರಿಣಾಮ ಹಾಗೂ ಮುಂದಿನ ಸವಾಲುಗಳು’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಕೈಗಾರಿಕೋದ್ಯಮಿಗಳು ಕಾರ್ಮಿಕ ಶಕ್ತಿಯನ್ನು ಧ್ವಂಸ ಮಾಡಲು ಮುಂದಾಗಿದ್ದಾರೆ. ಉದ್ದಿಮೆಗಳಿಂದ ಉದ್ಯೋಗ ಸೃಷ್ಟಿಯಾಗುತ್ತವೆ ಎಂಬ ನೆಪ ಹೇಳಿ ಕಾರ್ಮಿಕ ಕಾಯ್ದೆಗಳನ್ನು ಸಡಿಲಗೊಳಿಸುವ ಹುನ್ನಾರ ನಡೆಯುತ್ತಿದೆ. ಚಾಲ್ತಿಯಲ್ಲಿರುವ ಕಾರ್ಮಿಕಪರ ಕಾನೂನುಗಳನ್ನು ತೆಗೆದು ಹಾಕುವ ಅವೈಜ್ಞಾನಿಕ ಮತ್ತು ಅಸಾಂವಿಧಾನಿಕ ನಡೆಗೆ ಸಂಸತ್ತಿನಲ್ಲಿ ಜನಪ್ರತಿನಿಧಿಗಳೇ ಬೆಂಬಲ ನೀಡುತ್ತಿದ್ದಾರೆ’ ಎಂದರು.

ADVERTISEMENT

‘ಮಂಡನೆಯಾಗುವ ಮಸೂದೆಗಳ ಬಗ್ಗೆ ಸಂಸತ್ತಿನಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿಲ್ಲ. ಕೆಲವು ಸಂಸದರು ಮಸೂದೆಯ ಅಂಶಗಳನ್ನೂ ಸರಿಯಾಗಿ ಓದುವುದಿಲ್ಲ. ಹಾಗಾಗಿ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಹೊರಟು ಹೋಗುತ್ತಿದೆ’ ಎಂದರು.

‘ಸರ್ಕಾರ, ಎಷ್ಟೇ ಬಹುಮತ ಹೊಂದಿದ್ದರೂ, ಸಂವಿಧಾನ ವಿರೋಧಿ ನೀತಿ ಅನುಷ್ಠಾನಗೊಳಿಸಬಾರರು. ಪ್ರಜಾಪ್ರಭುತ್ವ, ಸಮಾಜವಾದಿ, ಗಣರಾಜ್ಯ ಹಾಗೂ ಸಾರ್ವಭೌಮ ತತ್ವಗಳ ಚೌಕಟ್ಟನ್ನು ಶಾಸಕಾಂಗವು ಮೀರಿದರೆ, ಅದಕ್ಕೆ ಕಡಿವಾಣ ಹಾಕಲು ನ್ಯಾಯಾಂಗ ಇನ್ನೂ ಜೀವಂತವಾಗಿದೆ ಎಂಬುದು ನೆನಪಿರಲಿ’ ಎಂದು ಎಚ್ಚರಿಸಿದರು.

‘ದುರ್ಬಲಕ್ಕೆ ಷಡ್ಯಂತ್ರ’
‘ಕಾರ್ಮಿಕರ ಕ್ಷೇಮಕ್ಕಾಗಿ ಜಾರಿಗೊಳಿಸಿರುವ ಕಾನೂನುಗಳನ್ನೇ ನಿಯಂತ್ರಿಸಲು ಪರ್ಯಾಯ ಕಾಯ್ದೆಗಳನ್ನು ರಚಿಸಲಾಗಿದೆ’ ಎಂದುನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ವಿಶ್ವವಿದ್ಯಾಲಯದ ಪ್ರೊ.ಬಾಬು ಮ್ಯಾಥ್ಯೂ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.