ಬೆಂಗಳೂರು: ‘ಗುಲಾಮಗಿರಿ ಪ್ರತಿಪಾದಿಸುವ ನಾಲ್ಕು ಕಾರ್ಮಿಕ ಸಂಹಿತೆಗಳು, ನೂತನ ಕರಾಳ ಕ್ರಿಮಿನಲ್ ಕಾನೂನುಗಳನ್ನು ರದ್ದುಪಡಿಸಬೇಕು’ ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್‌ನ (ಎಐಸಿಸಿಟಿಯು) ರಾಷ್ಟ್ರೀಯ ಅಧ್ಯಕ್ಷ ವಿ. ಶಂಕರ್ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ನಡೆದ ಎಐಸಿಸಿಟಿಯು ಪ್ರಥಮ ಬೆಂಗಳೂರು ಜಿಲ್ಲಾ ಸಮ್ಮೇಳನದಲ್ಲಿ ‘ಕಾರ್ಮಿಕರ ಕಿಡಿ’ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರತ ಬಿಟ್ಟು ತೊಲಗಬೇಕು ಎಂಬ ಅಭಿಯಾನವನ್ನು ಜುಲೈ 25ರಿಂದ ಆಗಸ್ಟ್ 9ರವರೆಗೆ ದೇಶದಾದ್ಯಂತ ಕೈಗೊಳ್ಳಲಾಗುವುದು’ ಎಂದರು.
‘ಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕಾರ್ಮಿಕರ ಹಕ್ಕುಗಳಿಗಾಗಿ, ಘನತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಕಾರ್ಪೊರೇಟ್-ಕಮ್ಯುನಲ್ ಫ್ಯಾಸಿಸಂ ವಿರುದ್ಧದ ಹೋರಾಟಗಳನ್ನು ರೂಪಿಸಲು ನೂತನ ನಕ್ಷೆಯನ್ನು ತಯಾರಿಸಬೇಕು’ ಎಂದು ಕರೆ ನೀಡಿದರು.
ಸಮ್ಮೇಳನದಲ್ಲಿ 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ನಿರ್ಮಲಾ ಅವರನ್ನು ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ, ಅಶೋಕ್ ಅವರನ್ನು ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ಇವರ ಜೊತೆಗೆ ಏಳು ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಎಐಸಿಸಿಟಿಯು ರಾಜ್ಯ ಘಟಕದ ಅಧ್ಯಕ್ಷ ಕ್ಲಿಫ್ಟನ್ ಡಿ ರೊಜಾರಿಯೋ, ಕಾರ್ಯದರ್ಶಿ ಪಿ.ಪಿ. ಅಪ್ಪಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.