ADVERTISEMENT

ಬಡವರಿಗೆ ವರ್ಷದೊಳಗೆ ಲಕ್ಷ ಮನೆ ಗುರಿ: ಸಚಿವ ವಿ. ಸೋಮಣ್ಣ

ಪ್ರಗತಿ ಪರಿಶೀಲಿಸಿದ ವಸತಿ ಸಚಿವ ವಿ. ಸೋಮಣ್ಣ – ಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 22:04 IST
Last Updated 29 ನವೆಂಬರ್ 2020, 22:04 IST
ಗೋಮಾಳ ಜಾಗ ಪರಿಶೀಲನೆ ಸಂದರ್ಭದಲ್ಲಿ ವಸತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪಂಚಾಯಿತಿ ಸದಸ್ಯರು ಇದ್ದಾರೆ
ಗೋಮಾಳ ಜಾಗ ಪರಿಶೀಲನೆ ಸಂದರ್ಭದಲ್ಲಿ ವಸತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪಂಚಾಯಿತಿ ಸದಸ್ಯರು ಇದ್ದಾರೆ   

ಹೆಸರಘಟ್ಟ: ಬೆಂಗಳೂರು ನಗರ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಸರ್ಕಾರಿ ಜಮೀನುಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಒಂದು ಲಕ್ಷ ಮನೆಗಳ ಕಾಮಗಾರಿಯ ಪ್ರಗತಿಯನ್ನು ವಸತಿ ಸಚಿವ ವಿ. ಸೋಮಣ್ಣ ಭಾನುವಾರ ಪರಿಶೀಲಿಸಿದರು. ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ ಈ ಮನೆಗಳನ್ನು ನಿರ್ಮಿಸಲಾಗುತ್ತಿದೆ.

‘ನಾಲ್ಕು ವರ್ಷಗಳ ಹಿಂದೆಯೇ ಅನುಮೋದನೆ ಪಡೆಯಲಾಗಿದ್ದರೂ ಯೋಜನೆ ಸ್ಥಗಿತಗೊಂಡಿದೆ. ಕೆಲಸ ನಡೆಯುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದವು. ಪ್ರಗತಿ ಪರಿಶೀಲನೆ ಕೈಗೊಳ್ಳಲಾಗಿದ್ದು, ಕಾಮಗಾರಿ ಚುರುಕುಗೊಳಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಅಸಂಘಟಿತ ಕಾರ್ಮಿಕರು, ಆಟೊ ಚಾಲಕರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಮನೆ ನೀಡಲಾಗುತ್ತದೆ. ವರ್ಷದೊಳಗೆ ಒಂದು ಲಕ್ಷ ಮನೆ ನಿರ್ಮಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈಯಿಂದ ಫಲಾನುಭವಿಗಳಿಗೆ ಹಂಚಿಕೆ ಮಾಡಿಸಲಾಗುವುದು’ ಎಂದರು.

ADVERTISEMENT

ಅಧಿಕಾರಿಗಳಿಗೆ ಸೂಚನೆ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಗಾಣಿಗರಹಳ್ಳಿ, ಯಲಹಂಕ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ಕಾಮಗಾರಿಯನ್ನು ವೀಕ್ಷಿಸಿದರು. ಬಿಳಿಜಾಜಿ, ಪಿಳ್ಳಹಳ್ಳಿ, ಲಕ್ಷ್ಮೀಪುರ ಗ್ರಾಮಗಳಲ್ಲಿ ಮನೆ ನಿರ್ಮಿಸಲು ಮಂಜೂರಾಗಿರುವ ಸ್ಥಳವನ್ನು ಪರಿಶೀಲಿಸಿ ಶೀಘ್ರವಾಗಿ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಗಾಣಿಗರಹಳ್ಳಿ ಗ್ರಾಮದಲ್ಲಿ ಕೆಲಸ ಮಂದಗತಿಯಿಂದ ನಡೆಯುತ್ತಿರುವ ಬಗ್ಗೆ ಬೇಸರಗೊಂಡ ಅವರು, ಸ್ಥಳದಲ್ಲಿದ್ದ ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

‘ಗಾಣಿಗರಹಳ್ಳಿಯಲ್ಲಿ ಐದು ಎಕರೆ ಜಾಗದಲ್ಲಿ 931 ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಎರಡು ಕೋಣೆಯ 200 ಮನೆಗಳು, ಒಂದು ಕೋಣೆಯ 791 ಮನೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದರು.

‘ಬೆಂಗಳೂರು ನಗರದಲ್ಲಿಯೇ ಸುಮಾರು 36 ಸಾವಿರ ಅರ್ಜಿಗಳು ಬಂದಿವೆ. ಲಕ್ಷ್ಮೀಪುರ, ಬಿಳಿಜಾಜಿ, ಪಿಲ್ಲಹಳ್ಳಿ, ಗ್ರಾಮಗಳಲ್ಲಿ ಗೋಮಾಳ ಜಾಗವನ್ನು ಮಂಜೂರು ಮಾಡಲಾಗಿದೆ. ಎರಡು ವಾರಗಳಲ್ಲಿ ಕೆಲಸ ಆರಂಭವಾಗಲಿದೆ’ ಎಂದರು.

‘ಗೋಮಾಳ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಅನ್ಯಾಯವಾಗದಂತೆ ಎಚ್ಚರವಹಿಸಿ’ ಎಂದೂ ಸೂಚಿಸಿದರು.

ದಾಸರಹಳ್ಳಿ ಶಾಸಕ ಆರ್‌.ಮಂಜುನಾಥ್‌, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ, ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ, ಯಲಹಂಕ ತಾಲ್ಲೂಕು ಪಂಚಾಯಿತಿ ಇಒ ಕಿಶೋರ್ ಕುಮಾರ್, ಹುರುಳಿಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಾರಾಯಣ ಸ್ವಾಮಿ, ನಿಗಮದ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.