ADVERTISEMENT

ಎಲ್ಲರಿಗೂ ಒಂದೇ ನಿಯಮ: ಗೌರವ್‌ ಗುಪ್ತ ಸ್ಪಷ್ಟನೆ

ಲಸಿಕಾ ಕೇಂದ್ರ–ಬಿಜೆಪಿ ಬೆಂಬಲಿಗರಿಗೆ ಹಿಂಬಾಗಿಲ ಪ್ರವೇಶ- ಆರೋಪ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 14:08 IST
Last Updated 1 ಜೂನ್ 2021, 14:08 IST
ಗೌರವ್‌ ಗುಪ್ತ
ಗೌರವ್‌ ಗುಪ್ತ   

ಬೆಂಗಳೂರು: ‘ಲಸಿಕೆ ವಿತರಣೆಗೆ ಎಲ್ಲರಿಗೂ ಒಂದೇ ನಿಯಮ. ಅದರ ಪ್ರಕಾರವೇ ಎಲ್ಲರೂ ಲಸಿಕೆ ಪಡೆಯಬೇಕು. ಯಾರಿಗೂ ವಿಶೇಷ ಆದ್ಯತೆ ನೀಡಲು ಅವಕಾಶ ಇಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸ್ಪಷ್ಟಪಡಿಸಿದರು.

ಕೆಲವು ಲಸಿಕಾ ಕೇಂದ್ರಗಳಲ್ಲಿ ಬಿಜೆಪಿ ಬೆಂಬಲಿಗರು ಸರದಿ ಪಾಲಿಸದೇ ಹಿಂಬಾಗಿಲಿನ ಮೂಲಕ ಬಂದು ಲಸಿಕೆ ಪಡೆಯುತ್ತಿದ್ದಾರೆ. ಬಿಜೆಪಿ ಪ್ರಮುಖರೇ ಲಸಿಕಾ ಕೇಂದ್ರದಲ್ಲಿ ಕುಳಿತುಕೊಂಡು ಇಂತಹ ವ್ಯವಸ್ಥೆ ಮಾಡುತ್ತಿದ್ದಾರೆ ಎಂಬ ಆರೋಪದ ಕುರಿತು ಸುದ್ದಿಗಾರ ಪ್ರಶ್ನೆಗೆ ಅವರು ಮಂಗಳವಾರ ಪ್ರತಿಕ್ರಿಯಿಸಿದರು.

‘ಲಸಿಕಾ ಕೇಂದ್ರಗಳ ನಿರ್ವಹಣೆಗೆ ಬಿಬಿಎಂಪಿ ಸಿಬ್ಬಂದಿ ಅಲ್ಲದೇ ಬೇರೆಯವರು ಇದ್ದರೆ ಅದನ್ನು ತಪ್ಪು ಎನ್ನಲಾಗದು. ಸ್ಥಳೀಯ ಪ್ರಮುಖರನ್ನು ವಿಶ್ವಾಸಕ್ಕೆ ಪಡೆದು ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. ಆದರೆ, ಲಸಿಕೆ ಅಭಿಯಾನವು ಸರ್ಕಾರ ನಿಗದಿಪಡಿಸಿದ ಮಾನದಂಡದ ಪ್ರಕಾರವೇ ನಡೆಯಲಿದೆ’ ಎಂದರು.

ADVERTISEMENT

‘ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚು ಸ್ಥಳಾವಕಾಶ ಇರುವ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳನ್ನು ಆರಂಭಿಸಿದ್ದೇವೆ. ಎಲ್ಲ 198 ವಾರ್ಡ್‌ಗಳಲ್ಲಿ ಲಸಿಕಾ ಕೇಂದ್ರಗಳಿವೆ. ಕೆಲವು ವಾರ್ಡ್‌ಗಳಲ್ಲಿ ಎರಡೆರಡು ಕಡೆ ಲಸಿಕೆ ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆಲ್ಲ ಈ ಕೇಂದ್ರಗಳಲ್ಲೇ ಲಸಿಕೆ ಹಾಕಲಾಗುತ್ತಿದೆ. ನೋಂದಣಿ ಮಾಡಿದವರಿಗೆ ಹಾಗೂ ನೇರವಾಗಿ ಕೇಂದ್ರಕ್ಕೆ ಬರುವವರಿಗೂ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದ್ದ 20 ಕಾರ್ಮಿಕ ವರ್ಗಗಳನ್ನು ಸರ್ಕಾರ ಗುರುತಿಸಿದೆ. ಈ ವರ್ಗಗಳಲ್ಲಿನ 18ರಿಂದ 44 ವರ್ಷಗಳ ಒಳಗಿನವರಿಗೆ ಲಸಿಕೆ ಹಾಕಲು ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಬಿಎಂಟಿಸಿ ಬಸ್‌ ಚಾಲಕರು ಹಾಗೂ ಸಿಬ್ಬಂದಿ, ಆಟೊ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ ಲಸಿಕೆ ಹಾಕಲು ಮಂಗಳವಾರ ಸ್ಥಳೀಯ ಮಟ್ಟದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘18 ವರ್ಷಗಳಿಂದ 45 ವರ್ಷಗಳ ಒಳಗಿನವರಿಗೆ ಲಸಿಕೆ ನೀಡಲು ಸರ್ಕಾರದ ಗೊತ್ತುಪಡಿಸಿದ ಆದ್ಯತಾ ಪಟ್ಟಿಯಲ್ಲಿ ಕೊಳೆಗೇರಿ ನಿವಾಸಿಗಳ ಹೆಸರು ಇಲ್ಲ. ಹಾಗಾಗಿ ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ ನೆರವಿನಡಿ ಕೊಳೆಗೇರಿಗಳ ಜನರಿಗೆ ಲಸಿಕೆ ಹಾಕಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲಿನ ನಿವಾಸಿಗಳಿಗೆ ಲಸಿಕೆ ಬಗ್ಗೆ ಸಂದೇಹ ನಿವಾರಣೆಗೆ ಸರ್ಕಾರೇತರ ಸಂಸ್ಥೆಗಳ ನೆರವಿನಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲಾಕ್‌ಡೌನ್‌ ಕುರಿತು ಸರ್ಕಾರವೇ ನಿರ್ಣಯ ಕೈಗೊಳ್ಳಲಿದೆ. ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರದ ಲಸಿಕಾ ಕೇಂದ್ರಗಳೆರಡಕ್ಕೂ ಲಸಿಕೆ ಪೂರೈಕೆ ಆಗುತ್ತಿದೆ. ಸೋಮವಾರ 90 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 40 ಸಾವಿರ ಮಂದಿ ಸರ್ಕಾರ ಲಸಿಕಾ ಕೇಂದ್ರಗಳಲ್ಲಿ ಹಾಗೂ 50 ಸಾವಿರ ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಮೂನೆ ಒದಗಿಸುವುದು ನೋಡೆಲ್‌ ಅಧಿಕಾರಿಗಳ ಹೊಣೆ’

‘18ರಿಂದ 44 ವರ್ಷಗಳ ಒಳಗಿನ ಆದ್ಯತಾ ಗುಂಪಿನ ಕಾರ್ಮಿಕರು ಲಸಿಕೆ ಪಡೆಯಲು ಅಗತ್ಯವಿರುವ ನಮೂನೆಗಳನ್ನು ಸಂಬಂಧಪಟ್ಟ ನೋಡಲ್‌ ಅಧಿಕಾರಿಗಳೇ ಪೂರೈಸಬೇಕು. ಲಸಿಕೆ ಪಡೆಯಲು ಬರುವವರು ನಮೂನೆಗಳನ್ನು ತರಬೇಕಾದ ಅಗತ್ಯವಿಲ್ಲ’ ಎಂದು ಗೌರವ್‌ ಗುಪ್ತ ಸ್ಪಷ್ಟಪಡಿಸಿದರು.

ಜೆರಾಕ್ಸ್‌ ಅಂಗಡಿಗಳು ತೆರೆಯದ ಕಾರಣ ನಮೂನೆಗಳ ಪ್ರತಿ ಮಾಡಿಸಲು ಕಾರ್ಮಿಕರು ಸಮಸ್ಯೆ ಎದುರಿಸುತ್ತಿರುವ ದೂರಿನ ಬಗ್ಗೆ ಅವರು ಪ್ರತಿಕ್ರಿಯಿಸಿದರು.

‘ಕೆಲಸಗಾರರು ಸರ್ಕಾರ ಗುರುತಿಸಿದ ಗುಂಪಿನಡಿ ಬರುತ್ತಾರೆಯೇ ಎಂಬುದನ್ನು ಅವರ ಸಂಘದ ಪದಾಧಿಕಾರಿಗಳು ಖಾತರಿಪಡಿಸಬೇಕು. ನಮೂನೆ ಒದಗಿಸಿ ಭರ್ತಿ ಮಾಡಲು ನೋಡೆಲ್ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳು ನೆರವಾಗಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.