ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ‘ಸಂಯುಕ್ತ ಲಸಿಕೆ’ ಹಾಕುವ ಕಾರ್ಯಕ್ರಮವನ್ನು ಪಾಲಿಕೆ ಆಯೋಜಿಸಿದೆ. ಇದಕ್ಕಾಗಿ ₹4.98 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ‘ಸಂಯುಕ್ತ ಲಸಿಕೆ’ ಹಾಕುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿರುವ 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆ ಮತ್ತು ‘ಕೋಲ್ಡ್ ಸ್ಟೋರೇಜ್’ಗಾಗಿ ₹4.98 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಬಿಎಂಪಿಯ ಪಶುಪಾಲನಾ ವಿಭಾಗದ ವತಿಯಿಂದ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬೀಸ್ ರೋಗ ನಿರೋಧಕ ಲಸಿಕೆಗಳನ್ನು ಹಾಕಲಾಗುತ್ತಿದೆ. ರೇಬೀಸ್ ಲಸಿಕೆ ಹೊರತುಪಡಿಸಿ ಬೀದಿ ನಾಯಿಗಳಲ್ಲಿ ಹಲವು ಮಾರಾಣಾಂತಿಕ ಸಾಂಕ್ರಾಮಿಕ ರೋಗಗಳು ಕಂಡು ಬರುತ್ತವೆ. ಅಲ್ಲದೆ, ಮನುಷ್ಯರಿಗೆ ನಾಯಿಗಳಿಂದ ಹರಡಬಹುದಾದ ರೋಗಗಳಿವೆ. ಅವುಗಳನ್ನು ತಡೆಗಟ್ಟಲು ‘ಸಂಯುಕ್ತ ಲಸಿಕೆ’ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಇದು ಅತ್ಯಗತ್ಯವಾಗಿದೆ ಎಂದು ಮಾಹಿತಿ ನೀಡಿದರು.
ಬೀದಿ ನಾಯಿಗಳಿಗೆ ಮಾರಕವಾಗಿರುವ ಕೆನೈನ್ ಡಿಸ್ಟೆಂಪರ್, ಕೆನೈನ್ ಹೆಪಟೈಟಿಸ್, ಕೆನೈನ್ ಪಾರ್ವವೈರಸ್, ಕೆನೈನ್ ಪ್ಯಾರಾ ಇನ್ಫ್ಲೂಯೆಂಜಾ, ಕೆನೈನ್ ಲೆಪ್ಟೊಸ್ಪೈರೋಸಿಸ್ (ನಾಯಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗ) ರೋಗಗಳನ್ನು ತಡೆಗಟ್ಟಲು ‘ಸಂಯುಕ್ತ ಲಸಿಕೆ’ ನೆರವಾಗುತ್ತದೆ’ ಎಂದರು.
‘ನಾಗರಿಕರ ಆರೋಗ್ಯ ಕಾಪಾಡುವುದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯ. ಇದೇ ರೀತಿ ಪಾಲಿಕೆ ವ್ಯಾಪ್ತಿಯ ಬೀದಿ ನಾಯಿಗಳ ಆರೋಗ್ಯ ಕಾಪಾಡುವುದೂ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. 2023ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ 2.79 ಲಕ್ಷ ನಾಯಿಗಳಿವೆ’ ಎಂದು ತಿಳಿಸಿದರು.
ಪಶು ಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಯಲಹಂಕ ವಲಯ ಆಯುಕ್ತ ಕರೀಗೌಡ, ಪಶು ಸಂಗೋಪನಾ ವಿಭಾಗದ ಜಂಟಿ ನಿರ್ದೇಶಕ ಡಾ. ಚಂದ್ರಯ್ಯ ಉಪಸ್ಥಿತರಿದ್ದರು.
Cut-off box - ಮನೆ ಬಾಗಿಲಿಗೆ ಇ–ಖಾತಾ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಇ–ಖಾತಾ ತಲುಪಿಸುವ ಅಭಿಯಾನವನ್ನು ಮುಂದಿನ ವಾರ ಆರಂಭಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ‘ನಮ್ಮ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕರಡು ಇ–ಖಾತಾದಂತೆ ಯಾವುದೇ ರೀತಿಯ ಬದಲಾವಣೆ ಇಲ್ಲದಿದ್ದರೆ ನಮ್ಮ ಸಿಬ್ಬಂದಿ ಅವರ ಮನೆಗೆ ಹೋಗಿ ಅಗತ್ಯ ದಾಖಲೆಗಳನ್ನು ಪಡೆದು ಅಪ್‌ಲೋಡ್ ಮಾಡಿ ಅಂತಿಮ ಇ–ಖಾತಾ ನೀಡಲಿದ್ದಾರೆ’ ಎಂದರು. ಈ ಸೇವೆಗಾಗಿ ಟೆಂಡರ್ ಕರೆಯಲಾಗಿದ್ದು ಅದನ್ನು ಅಂತಿಮಗೊಳಿಸಲಾಗುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
Cut-off box - ಕೆರೆ ಒತ್ತುವರಿ: ಇಇಗಳಿಗೆ ನೋಟಿಸ್ ‘ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿ ತೆರವುಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸದ ಕೆರೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ’ ಎಂದು ತುಷಾರ್ ಗಿರಿನಾಥ್ ಹೇಳಿದರು. ‘ಕೆರೆಗಳ ಒತ್ತುವರಿ ತೆರವಿನ ಬಗ್ಗೆ ಹೈಕೋರ್ಟ್‌ಗೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಇದೀಗ ತೆರವಿನ ವರದಿಯನ್ನೂ ಸಲ್ಲಿಸಲಾಗುತ್ತದೆ. ಯಾವ ಅಧಿಕಾರಿ ಕಾರ್ಯನಿರ್ವಹಿಸಿಲ್ಲವೋ ಅವರಿಗೆ ನೋಟಿಸ್ ನೀಡಲಾಗುತ್ತದೆ. ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ಗೂ ಮನವಿ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.